ಉಡುಪಿ, ಮೇ 31 (Daijiworld News/SM): ಮೇ 16ರಿಂದ ನಾಪತ್ತೆಯಾಗಿದ್ದ ಕಟಪಾಡಿ ಅಗ್ರಹಾರ ನಿವಾಸಿ ಗೋಪಾಲ ಪೂಜಾರಿ ಅವರ ಪತ್ನಿ ರೇಣುಕಾ ಪೂಜಾರಿ(52) ಅವರು ಶವವಾಗಿ ಪತ್ತೆಯಾಗಿದ್ದಾರೆ. ಏಣಗುಡ್ಡೆ ಗ್ರಾಮದ ಮಣಿಪುರ ರೈಲ್ವೇ ಬ್ರಿಡ್ಜ್ ಬಳಿಯ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಮುಂಬಯಿಯಲ್ಲಿ ಉದ್ಯೋಗದಲ್ಲಿರುವ ಗೋಪಾಲ ಪೂಜಾರಿ ಅವರು ಪತ್ನಿ ರೇಣುಕಾ ಮತ್ತು ಮಕ್ಕಳೊಂದಿಗೆ ಎ. 29ರಂದು ಕಟಪಾಡಿಗೆ ಬಂದಿದ್ದರು. ಮೇ 15ರಂದು ಪತ್ನಿ ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಸಂತೆಕಟ್ಟೆ ಗೊರಟ್ಟಿ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ತಾಯಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದರು.
ಈ ವೇಳೆ ಮನೆಯಲ್ಲಿದ್ದ ಅವರ ಪತ್ನಿ ರೇಣುಕಾ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಮನೆಯವರನ್ನು ವಿಚಾರಿಸಿದಾಗ ಹತ್ತಿರದ ಚರ್ಚ್ ರಸ್ತೆಯಲ್ಲಿರುವ ಅಣ್ಣನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾಗಿ ಮನೆಯವರು ಹೇಳಿದ್ದರು. ಅದರಂತೆ ಗೋಪಾಲ ಪೂಜಾರಿಯವರು ಅಲ್ಲಿಗೆ ಹೋಗಿ ವಿಚಾರಿಸಿದಾಗ ರೇಣುಕಾ ಅವರು ಅಲ್ಲಿಗೂ ಹೋಗದೇ, ವಾಪಾಸು ಮನೆಗೂ ಬಾರದೇ ಇದ್ದುದರಿಂದ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಹಿಳೆಯ ಮೊಬೈಲ್ ಲೊಕೇಶನ್ ಮಣಿಪುರವನ್ನು ತೋರಿಸುತ್ತಿತ್ತು. ಮಣಿಪುರ ಸುತ್ತಮುತ್ತ, ಕಾಡಿನಲ್ಲಿ ಮನೆಯವರು ಹುಡುಕಾಟ ನಡೆಸಿದ್ದಾರೆ. ಆದರೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಮಹಿಳೆ ಶವ ಕಂಡು ಬಂದಿರುವ ಸ್ಥಳವು ತೀರಾ ತಗ್ಗು ಪ್ರದೇಶದಲ್ಲಿದ್ದು ಮರಕ್ಕೆ ತಾನು ಧರಿಸಿದ್ದ ಚೂಡಿದಾರದ ಶಾಲನ್ನು ಬಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಂತಿತ್ತು.