ಉಡುಪಿ, ಮೇ31(Daijiworld News/SS): ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು. ಇದಕ್ಕೆ ಕಾಂಗ್ರೆಸ್ನ ರಾಹುಲ್ ಗಾಂಧಿ ಕೂಡಾ ಸಹಕಾರ ಕೊಡಬೇಕು. ಮಂದಿರ ನಿರ್ಮಾಣದಿಂದ ಯಾವುದೇ ಪಕ್ಷ, ಧರ್ಮಕ್ಕೂ ಹಾನಿಯಾಗಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಭಾರತ ಮಹಾತ್ಮ ಗಾಂಧೀಜಿ ಅವರಿಂದ ಆರಂಭ ಆದದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಆವಿರ್ಭಾವ ಮಾಡಿದವರು. ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ, ರಾಷ್ಟ್ರೀಯತ್ವ ಎಲ್ಲವೂ ಜಾಗೃತವಾಗಿವೆ. ಹಾಗಾಗಿ ವೇದವ್ಯಾಸರೇ ರಾಷ್ಟ್ರಪಿತರು ಎಂಬುವುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ಬಗ್ಗೆ ನನಗೆ ಬಹಳ ಗೌರವ ಇದೆ. ನಾಥೂರಾಮ್ ಗೋಡ್ಸೆಯನ್ನು ರಾಷ್ಟ್ರಭಕ್ತ ಎಂದಿರುವುದು ರಾಷ್ಟ್ರಕ್ಕೆ ಮಾಡಿದ ದೊಡ್ಡ ಅವಮಾನ. ಇಂತಹ ಹೇಳಿಕೆ ಕೊಟ್ಟವರ ಬಗ್ಗೆ ನನಗೆ ಅಸಮಾಧಾನ ಇದೆ. ಮಹಾತ್ಮ ಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರು. ವೇದವ್ಯಾಸರು ನಮ್ಮ ರಾಷ್ಟ್ರಪಿತರು ಎಂದರು.
ರಾಜಕೀಯ ಪ್ರಚಾರ ವೇಳೆಯೂ ಅಭಿವೃದ್ಧಿ ಕಡೆಗೆ ಪಕ್ಷಗಳು ಗಮನವೇ ಕೊಡಲಿಲ್ಲ. ಮುಂದಾದರೂ ಅಭಿವೃದ್ಧಿ ಬಗ್ಗೆ ಮಾತನಾಡುವಂತಾಗಬೇಕು. ಹಿಂದೂ ವಿಚಾರ ತೆಗೆದರೆ ಬಹುಸಂಖ್ಯಾತರು ಜಾಗೃತರಾಗುತ್ತಾರೆ. ಪ್ರತ್ಯೇಕ ಹೋರಾಟ ಮಾಡಿದರೆ ವಿಪಕ್ಷಗಳು ಹೆಚ್ಚಿನ ಸೀಟು ಗೆಲ್ಲುತ್ತಿದ್ದವು ಎಂದು ಅಭಿಪ್ರಾಯಪಟ್ಟರು.
2 ನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿದ್ದೇವೆ. ದೇಶದ ರಕ್ಷಣೆ, ಕಾಶ್ಮೀರದ ಸಮಸ್ಯೆ ಪರಿಹಾರ ಕಾಣಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಕೃಷಿಗೆ ಮಾರಕವಾಗದ ಉದ್ಯಮ ಸ್ಥಾಪನೆಯಾಗಬೇಕು ಎಂದು ಹೇಳಿದರು.
ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆದಿದೆ. ಕಳೆದ ಬಾರಿ ಹೊಸ ಅನುಭವ, ಇದು ಹೆಚ್ಚಿನ ಉತ್ಸಾಹ ಕೊಟ್ಟಿದೆ. ಜನರಲ್ಲಿ ಮೋದಿಯ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು. ಆ ಗಾಂಭೀರ್ಯ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ನನಗೆ ದೇಶದ ಎಲ್ಲ ಪಕ್ಷಗಳು ಸಮಾನ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಸ್ವತಂತ್ರವಾಗಿ ಹೋರಾಟ ಮಾಡಬೇಕಿತ್ತು. ಇದರಿಂದ ವಿಪಕ್ಷಗಳು ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಅದು ಆಗಿಲ್ಲ. ಬಿಜೆಪಿ ಕೋಮುವಾದಿ ಪಕ್ಷ, ಅದನ್ನು ಸೋಲಿಸಬೇಕೆಂದು ಎಲ್ಲಾ ಪಕ್ಷಗಳು ಒಂದಾದವು. ಈ ಬೆಳವಣಿಗೆಯಿಂದ ಹಿಂದೂಗಳಲ್ಲಿ ಹಿಂದುತ್ವ ಜಾಗೃತವಾಯಿತು ಎಂದು ಅಭಿಪ್ರಾಯಪಟ್ಟರು.
ಚುನಾವಣೆಯಲ್ಲಿ ಹಿಂದೂ ವಿರೋಧಿ ದೃಷ್ಟಿಕೋನ ಹೆಚ್ಚಾಯಿತೇ ಹೊರತು, ಅಭಿವೃದ್ಧಿ ವಿಚಾರ ಚರ್ಚೆಯಾಗಿಲ್ಲ. ದೇಶಾದ್ಯಂತ ನಿರೀಕ್ಷೆಗೂ ಮೀರಿ ಮತದ ಪ್ರಮಾಣ ಹೆಚ್ಚಿತು. ಧರ್ಮದ ವಿಚಾರ ತೆಗೆದರೆ ಬಹುಸಂಖ್ಯಾತರಾದ ಹಿಂದೂಗಳು ಜಾಗೃತರಾಗುತ್ತಾರೆ. ಹಾಗಾಗಿ ಇನ್ನು ಮುಂದಾದರೂ ದೇಶದಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.