ಪಡುಬಿದ್ರಿ ನ 30: ಹಲವು ದಿನಗಳಿಂದ ಬಹು ವಿವಾದಕ್ಕೆ ಕಾರಣವಾಗಿದ್ದ ಗಾಳಿಯಂತ್ರ ಉತ್ಪಾದನಾ ಸುಜ್ಲಾನ್ ಕಂಪನಿ ಆಡಳಿತ ಮತ್ತು ಕಾರ್ಮಿಕರ ಸಂಘರ್ಷಕ್ಕೆ ಕೊನೆಗೂ ತೆರೆಬಿದ್ದಿದೆ. ಲಾಕೌಟ್ ವಿಚಾರದಲ್ಲಿ ಸುಜ್ಲಾನ್ ಕಾರ್ಮಿಕರು ಮತ್ತು ಆಡಳಿತ ಮಂಡಳಿ ವರ್ಗದ ನಡುವೆ ಒಪ್ಪಂದವೊಂದು ಉಂಟಾಗಿದ್ದು ಕಳೆದ ಹಲವು ದಿನಗಳಿಂದ ಉಂಟಾಗಿದ್ದ ವಿವಾದ ಸದ್ಯ ತಣ್ಣಾಗಾಗಿದೆ. ಒಪ್ಪಂದದ ಅನ್ವಯ ಮತ್ತೆ 326 ಕಾರ್ಮಿಕರೂ ಮತ್ತೆ ಕಂಪನಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಇದೇ ವೇಳೆ ಕಾರ್ಮಿಕರ ವಿರುದ್ದ ಹೂಡಲಾದ ಸೊತ್ತು ಹಾನಿ ಕೇಸು ಆಂತರಿಕ ವಿಚಾರಣೆಗಳನ್ನು ಸುಜ್ಲಾನ್ ಕಂಪನಿ ಒಪ್ಪಿಕೊಂಡಿದೆ. ಕಾರ್ಮಿಕರೊಂದಿಗಿನ ಒಪ್ಪಂದಕ್ಕೆ ಕಂಪೆನಿಯ ಪೂನಾದ ಕಾರ್ಪೋರೇಟ್ ಕಚೇರಿಯಲ್ಲಿ ನಡೆಯಲಿರುವ ಆಡಳಿತ ಮಂದಳಿ ಸಭೆಯಲ್ಲಿ ಅನುಮೋದನೆ ಸಿಗಬೇಕಿದ್ದ ಬಳಿಕ ಲಾಕೌಟ್ ತೆರವಾಗಲಿದೆ. ಹಾಗೂ ಅಲ್ಲಿವರೆಗಿನ ಸಂಬಳ ಪಾವತಿಸುವುದಾಗಿ ಕಂಪನಿ ತಿಳಿಸಿದೆ ಎಂದು ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಸೆಟ್ಟಿ ಸ್ಪಷ್ಟಪಡಿಸಿದ್ದಾರೆ. ಇನ್ನು ಕಂಪನಿಯ ವ್ಯಾವಹಾರಿಕ ನಷ್ಟದಿಂದ ಒಂದು ವರ್ಷದವರೆಗೆ ಸಂಬಳದಲ್ಲಿ ಏರಿಕೆ ಇಲ್ಲ ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.