ಉಡುಪಿ, ನ.30: ಬೀದಿನಾಯಿಯೊಂದರ ತಲೆಗೆ ಪ್ಲಾಸ್ಟಿಕ್ ಬಾಟಲ್ ಸಿಕ್ಕಿ ಹಾಕಿಕೊಂಡು ಒಂದು ವಾರ ಅನ್ನ ಆಹಾರವಿಲ್ಲದೆ ಒದ್ದಾಡಿದ, ಬಳಿಕ ಸಾಮಾಜಿಕ ಕಾರ್ಯಕರ್ತರು ರಕ್ಷಿಸಿದ ಘಟನೆ ನಗರದ ಒಳಕಾಡು ವಾರ್ಡಿನಲ್ಲಿ ನಡೆದಿದೆ. ಪ್ಲಾಸ್ಟಿಕ್ ನಿಷೇದ ಬಗ್ಗೆ ಆಗಾಗ್ಗೆ ಚರ್ಚೆಗಳು ಕೇಳಿ ಬರುತ್ತಿದ್ದರೂ ಅದೂ ಕೇವಲ ಕಾರ್ಯಗತವಾಗದೇ ಚರ್ಚೆಗೆ ಮಾತ್ರ ಸೀಮಿತವಾಗಿದೆ. ಪ್ಲಾಸ್ಟಿಕ್ ನಿಂದ ಪರಿಸರ ಸಮುದ್ರ ಜೀವಸಂಕುಲಕ್ಕೆ ಹಾನಿಯಾಗುತ್ತಿರುವ ಘಟನೆ ಬಗ್ಗೆ ಆಗಾಗ್ಗೆ ವರದಿಯಾಗುತ್ತಿರುತ್ತದೆ. ಇದಕ್ಕೆ ಮತ್ತೊಂದು ಜೀವಂತ ಉದಾಹರಣೆ ಇಲ್ಲಿದೆ. ಆಹಾರ ಅರಸುತ್ತಿದ್ದ ಬೀದಿ ನಾಯಿ ತಲೆಗೆ ಪ್ಲಾಸ್ಟಿಕ್ ನ ಬಾಟಲೊಂದು ಸಿಕ್ಕಿ ಹಾಕಿ ಕೊಂಡಿದೆ. ಸುಮಾರು ಎಂಟು ದಿನಗಳಿಂದ ಅನ್ನ ಆಹಾರವಿಲ್ಲದೆ ಬಾಟಲಿಯನ್ನು ತಲೆಯಲ್ಲಿ ಇರಿಸಿಕೊಂಡು ಬೀದಿ ಬೀದಿಯಲ್ಲಿ ಅಲೆಯುತ್ತಿತ್ತು. ಕೆಲವರು ಏಳು ದಿನಗಳಿಂದ ನಾಯಿಯನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಭಯಭೀತಿಕೊಂಡಿದ್ದ ನಾಯಿ ಯಾರದ್ರೂ ಹತ್ತಿರ ಸುಳಿದೊಡನೆ ದಿಕ್ಕಾಪಾಲಗಿ ಓಡುತ್ತಿತ್ತು.
ಅನ್ನ ಆಹಾರ ಇಲ್ಲದೆ ನಿತ್ರಾಣಗೊಂಡ ನಾಯಿ ನ.30 ರಂದು ಸುಲಭವಾಗಿ ಸೆರೆ ಸಿಕ್ಕಿದೆ. ತದನಂತರ ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿನಯಚಂದ್ರ ಸಾಸ್ತನ ಸೇರಿಕೊಂಡು ನಾಯಿಯ ಕುತ್ತಿಯೊಳಗಿದ್ದ ಬಾಟಲಿಯನ್ನು ಬೇರ್ಪಡಿಸಿದ್ದಾರೆ. ನಂತರ ನಾಯಿ ಬದುಕಿದೆಯೇ ಬಡ ಜೀವವೆಂದು ಪಲಾಯನ ಮಾಡಿದೆ. ಬೀದಿ ಶ್ವಾನ ರಕ್ಷಿಸಿದ, ಸಾಮಾಜಿಕ ಕಾರ್ಯಕರ್ತರ ಪ್ರಾಣಿದಯೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ನಗರಾಡಳಿತ ನಗರದಲ್ಲಿ ಹೆಚ್ಚಳ ಕಂಡಿರುವ ಬೀದಿ ನಾಯಿಗಳ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.