ಕುಂದಾಪುರ, ಅ.08(DaijiworldNews/AK):ಗ್ರಾಮೀಣ ಭಾಗಗಳ ಜನ ಸಮುದಾಯಕ್ಕೆ ಆರೋಗ್ಯ ಸಂರಕ್ಷಣೆಯ ಉಚಿತ ಶಿಬಿರಗಳು ಹೆಚ್ಚು ಹೆಚ್ಚು ನಡೆದಾಗ ಜನಜೀವನ ಸುಗಮವಾಗುತ್ತದೆ ಎಂದು ವಿ.ವಿ.ಆಗ್ರೋ ಪ್ರಾಡಕ್ಟ್ ಸಂಸ್ಥೆಯ ಮಾಲಕ ವೆಂಕಟೇಶ್ ನಾಯಕ್ ಹೇಳಿದ್ದಾರೆ.
ಅವರು ಮಂಗಳವಾರ ಮಣಿಪಾಲ ಕೆ ಎಂ ಸಿ ಯವರು ನಡೆಸಿಕೊಡುವ ಈ ಶಿಬಿರವನ್ನು ಅಂತರಾಳ ಫೌಂಡೇಶನ್(ರಿ ), ವಿ. ವಿ ಆಗ್ರೋ ಪ್ರಾಡಕ್ಟ್ಸ್, ಮತ್ತು ಅಮೃತ ಧಾರ ಲಯನ್ಸ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕುಂದಾಪುರದ ದೇವಲ್ಕುಂದದಲ್ಲಿರುವ ವಿ ವಿ ಆಗ್ರೋ ಪ್ರಾಡಕ್ಟ್ ಸಂಸ್ಥೆಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.
ಇದೇ ಸಂದರ್ಭ ಕೆ.ಎಂ.ಸಿ ಮುಖ್ಯಸ್ಥೆ ದಿವ್ಯಾ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಇಂತಹಾ ವೈದ್ಯಕೀಯ ತಪಾಸಣೆ ಶಿಬಿರಗಳು ನಡೆಯುವುದರಿಂದ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳು ಆರೋಗ್ಯ ಬಗ್ಗೆ ಹೆಚ್ಚು ಮುಂಜಾಗ್ರತೆ ತೆಗೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಮೃತಧಾರಾ ಲಯನ್ಸ್ ಕ್ಲಬ್ ಅಧ್ಯಕ್ಷೆ ಡಾ. ವಾಣಿಶ್ರೀ ಐತಾಳ್ ಮಾತನಾಡಿ, ಗ್ರಾಮೀಣಭಾಗಗಳಲ್ಲಿ ವಿವಿ ಅಗ್ರೋ ಪ್ರಾಡಕ್ಟ್ ನಂತಹಾ ಸಂಸ್ಥೆಗಳು ಆರೋಗ್ಯದ ಕಡೆಗೆ ಗಮನ ಹರಿಸುತ್ತಿರುವುದು ಶ್ಲಾಘನೀಯ ಎಂದರು. ಕುಂದಾಪುರ ರೈಲ್ವೇ ಪ್ರಯಾಣಿಕರ ಹಿತರಕ್ಷಣ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ಮಾತನಾಡಿ, ವಿವಿ. ಆಗ್ರೋ ಪ್ರಾಡಕ್ಟ್ ನಂತಹಾ ಸಂಸ್ಥೆಗಳು ಗ್ರಾಮೀಣ ಭಾಗಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚು ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಹಿರಿಯ ಚೇತನ ಶ್ರೀಮತಿ ಮೋಹಿನಿ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸರಸ್ವತಿ ಜಿ. ಪುತ್ರನ್, ಆಶಾ ಶಿವರಾಮ್, ಗೀತಾ ನಾಯಕ, ವರ್ಷ ನಾಯಕ, ಪದ್ಮನಾಭ ಶೆಣೈ, ಜೋಯ್ ಕರ್ವಲ್ಲೋ, ಕೆಂಚನೂರು ಸೋಮಶೇಖರ್ ಶೆಟ್ಟಿ, ಶ್ರೀನಿವಾಸ್ ನಾಯಕ, ಆಶಾ ನಾಯಕ ಉಪಸ್ಥಿತರಿದ್ದರು. ವೆಂಕಟೇಶ್ ನಾಯಕ ಸ್ವಾಗತಿಸಿದರು. ಅಂತಾರಾಳ ನಿರ್ದೇಶಕಿ ಲೀನಾ ನಾಯಕ ಶುಭ ಹಾರೈಸಿದರು. ಅಶೋಕ್ ಎನ್ ವಂದಿಸಿದರು. ಅಂತರಾಳ ಪೌಂಡೇಶನ್ ಮುಖ್ಯಸ್ಥ ವಿವೇಕ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.