ಬಂಟ್ವಾಳ, ಜೂ 01 (Daijiworld News/SM): ತಾಲೂಕಿನ ಅಮ್ಟಾಡಿಯಲ್ಲಿ ನಡೆದಿದ್ದ ನಿತಿನ್ ಕುಮಾರ್ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ನಿವಾಸಿಗಳಾದ ಚೇತನ್ ಪೂಜಾರಿ(28) ಮತ್ತು ರಾಕೇಶ್(27) ಎಂಬವರು ಬಂಧಿತ ಆರೋಪಿಗಳು. ಜೂನ್ ೧ರಂದು ಸಂಜೆ ಆರೋಪಿಗಳನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮೇ 30ರಂದು ಆರೋಪಿಗಳು ಕೃತ್ಯ ಎಸಗಿದ್ದರು. ನಿತಿನ್ ಕುಮಾರ್ ಬಂಟ್ವಾಳ ಪುರಸಭಾ ವ್ಯಾಪ್ತಿಯ ಲೊರೆಟ್ಟೊ ಪದವು ಎಂಬಲ್ಲಿ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭ ಮೂವರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ನಿತಿನ್ ಪೂಜಾರಿ ಎಂಬವರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿತಿನ್ ಪೂಜಾರಿ ಮೂಲತಃ ಲೊರೆಟ್ಟೊ ಸಮೀಪದ ಪೆದಮಲೆಯಲ್ಲಿ ವಾಸವಾಗಿದ್ದರು. ಅದರೆ ಕೆಲವೊಂದು ಕಾರಣದಿಂದ ಇವರು ಮಾರ್ನಬೈಲು ಸಮೀಪದ ಬೊಳ್ಳಾಯಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ನಿತಿನ್ ವಿದೇಶದಲ್ಲಿ ಉದ್ಯೋಗ ದಲ್ಲಿದ್ದು ಮೂರು ತಿಂಗಳ ಹಿಂದೆ ಊರಿಗೆ ಆಗಮಿಸಿದ್ದರು.