ಸುಬ್ರಹ್ಮಣ್ಯ, ಅ.09(DaijiworldNews/AA): ಅರಣ್ಯ ಇಲಾಖೆಯ ಹೊಸ ಮಾರ್ಗ ಸೂಚಿಯೊಂದಿಗೆ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಪರ್ವತ ಚಾರಣಕ್ಕೆ ಇದೀಗ ಅವಕಾಶ ನೀಡಲಾಗಿದೆ. ಕುಮಾರ ಪರ್ವತ ಚಾರಣಕ್ಕೆ ತೆರಳುವ ಚಾರಣಿಗರು ಆನ್ಲೈನ್ ಮೂಲಕ ಬುಕ್ ಮಾಡಿದ್ದು, ಮಂಗಳವಾರ ಚಾರಣ ಆರಂಭಿಸಿದ್ದಾರೆ.
ಆನ್ಲೈನ್ ಮೂಲಕ ನೋಂದಾಯಿಸಿದ ಮೊದಲ ತಂಡ ನಿನ್ನೆ ಚಾರಣ ಕೈಗೊಂಡಿದೆ. ಹೊಸ ಮಾರ್ಗಸೂಚಿ ಜಾರಿಯಾದ ಬಳಿಕ ಚಾರಣಿಗರು ಕುಕ್ಕೆ ಸುಬ್ರಹ್ಮಣ್ಯದ ದೇವಗದ್ದೆ ಮೂಲಕ ಚಾರಣ ಕೈಗೊಂಡಿದ್ದಾರೆ.
ನಿನ್ನೆ ಚಾರಣ ಕೈಗೊಂಡ ಈ ಮೊದಲ ತಂಡದಲ್ಲಿ 9 ಮಂದಿ ಚಾರಣಿಗರು ಇದ್ದಾರೆ. ಕಳೆದ ವರ್ಷದವರೆಗೆ ಕುಮಾರಪರ್ವತ ಚಾರಣ ಸುಲಭವಾಗಿತ್ತು. ಕೆಲ ಕಠಿಣ ನಿಯಮಗಳೊಂದಿಗೆ ನೇರವಾಗಿ ಚಾರಣ ಆರಂಭಿಸಬಹುದಿತ್ತು. ಮಧ್ಯೆ ಮಧ್ಯೆ ತಂಗಲು ಅವಕಾಶವಿತ್ತು. ಆದರೆ ಈ ಬಾರಿ ಚಾರಣದ ನಡುವೆ ತಂಗಲು ನಿರ್ಬಂಧ ಹೇರಲಾಗಿದ್ದು, ಚಾರಣಿಗರು ಒಂದೇ ದಿನದಲ್ಲಿ ಚಾರಣ ಮುಗಿಸಬೇಕಾದ ಅನಿವಾರ್ಯತೆಯಿದೆ.