ಮಂಗಳೂರು, ಅ.09(DaijiworldNews/AA): ಲೈಸನ್ಸ್ ರಾಜ್ ಕಾಯ್ದೆಯನ್ನು ಆರಂಭಿಸಲು ಮುಂದಾಗಿರುವ ಸ್ಥಳೀಯ ಸಂಸ್ಥೆಗಳ ವಿರುದ್ಧ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ಅಂಗವಾಗಿ ಮಂಗಳೂರು ನಗರದಲ್ಲೂ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಂಘದ ವಕ್ತಾರ ಸುನೀಲ್ ಕುಮಾರ್ ಬಜಾಲ್ ಅವರು, ಭಾರತೀಯ ಚಿಲ್ಲರೆ ವ್ಯಾಪಾರಿಗಳ ಸಂಘಗಳ ಒಕ್ಕೂಟದ ಅಧೀನ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯದ ಸಣ್ಣ ಬೀಡಿ ಸಿಗರೇಟು ಮಾರಾಟಗಾರರ ಸಂಘದ 2 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಸ್ಥರು ರಾಜ್ಯಾದ್ಯಂತ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಲೈಸೆನ್ಸ್ ರಾಜ್ ಪ್ರಸ್ತಾವನೆಯನ್ನು ಕೈಬಿಡಲಾಗುವುದು ಮತ್ತು ಸಣ್ಣ ವ್ಯಾಪಾರಿಗಳಿಗೆ ಕಿರುಕುಳ ನೀಡುವುದಕ್ಕೆ ಬಿಡುವುದಿಲ್ಲ ಎಂದು ಸರ್ಕಾರ ಮತ್ತು ಅಧಿಕಾರಿಗಳು ಆಶ್ವಾಸನೆ ನೀಡಿದ್ದರೂ ಮತ್ತೆ ಲೈಸೆನ್ಸ್ ರಾಜ್ ಹೇರಲು ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.
ಮಂಗಳೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದ ಸಣ್ಣ ವ್ಯಾಪಾರಿಗಳು ಕಠೋರ ಕಾನೂನಿನ ವಿರುದ್ಧ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಚಿಲ್ಲರೆ ಬೀಡಿ-ಸಿಗರೇಟ್ ವ್ಯಾಪಾರಿಗಳ ಸಂಘವು ಉದ್ದೇಶಿತ ಕಾಯ್ದೆ ಜಾರಿಗೆ ತಂದರೆ ಲಕ್ಷಗಟ್ಟಲೆ ಸಣ್ಣ ವ್ಯಾಪಾರಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ತೊಂದರೆಯಾಗಲಿದೆ ಎಂಬುದನ್ನು ಅರಿತುಕೊಂಡಿದೆ. ಈ ಸಣ್ಣ ವ್ಯಾಪಾರಿಗಳು ಈಗಾಗಲೇ ಕಳೆದೆರಡು ವರ್ಷಗಳಿಂದ ಆರ್ಥಿಕವಾಗಿ ಭಾರಿ ಹಿನ್ನೆಡೆ ಅನುಭವಿಸಿದ್ದಾರೆ ಮತ್ತು ಜೀವನೋಪಾಯಕ್ಕಾಗಿ ಬಹಳ ಕಷ್ಟಪಡುತ್ತಿದ್ದಾರೆ. ಇಂಥಾ ಸ್ಥಿತಿಯಲ್ಲಿ ಮತ್ತಷ್ಟು ಕಾಯ್ದೆಗಳು ಅವರ ವ್ಯಾಪಾರ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಸುಕುಮಾರ್ ತೊಕ್ಕೊಟ್ಟು, ಯೋಗೀಶ್ ಜೆಪ್ಪಿನಮೊಗರು, ಮೆಲ್ವಿನ್ ಪಿಂಟೋ, ಅಬ್ದುಲ್ ಸಲೀಮ್, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.