ಉಡುಪಿ, ಜೂ 01 (Daijiworld News/SS): ಹಾವಂಜೆ ಬಾಣೆಬೆಟ್ಟು ಎಂಬಲ್ಲಿ ಮಹಿಳೆಯನ್ನು ಬೆದರಿಸಿ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ವಕ್ಕೇತ್ತೂರು ನಿವಾಸಿ ಲಕ್ಷ್ಮಣ ಪೂಜಾರಿ(31) ಬಂಧಿತ ಆರೋಪಿಯಾಗಿದ್ದಾನೆ. ಮೇ 15ರಂದು ಆರೋಪಿ ಗ್ರಾಹಕರ ಸೋಗಿನಲ್ಲಿ ಅಂಗಡಿಗೆ ಬಂದು ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ ನಾಲ್ಕುವರೆ ಪವನ್ ಚಿನ್ನದ ಕರಿಮಣಿ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ.
ಆರೋಪಿ ಪತ್ತೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಿರಂತರ ಹುಡುಕಾಟದ ಬಳಿಕ ಜೂನ್ ೦೧ರ ಶನಿವಾರದಂದು ಆರೋಪಿ ಲಕ್ಷಣನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಸ್ಕೂಟರ್, ಮೊಬೈಲ್ ಹಾಗೂ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.