ಮೂಡುಬಿದಿರೆ ನ 30 : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಒಂದು ದಿನ ನಡೆಯುವ ‘ಆಳ್ವಾಸ್ ವಿದ್ಯಾರ್ಥಿ ಸಿರಿ -2017’ ವಿದ್ಯಾರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನಕ್ಕೆ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನ 30 ರ ಗುರುವಾರ ಚಾಲನೆ ದೊರಕಿದೆ. ಪ್ರಸಿದ್ಧ ರಂಗಕರ್ಮಿ, ನಟ ಮಂಡ್ಯ ರಮೇಶ್ ವಿದ್ಯಾರ್ಥಿಸಿರಿ ಹಾಗೂ ಸಿನಿಸಿರಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಏಕಕಾಲದಲ್ಲಿ ಸಂಸ್ಕೃತಿಯ ಬಹುತ್ವಗಳು ಲಕ್ಷಾಂತರ ಜನರನ್ನು ತಲುಪಿಸುವಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಖ್ಯ ಪಾತ್ರವಹಿಸಿದೆ ಎಂದರು. ವಿದ್ಯಾರ್ಥಿಸಿರಿ ಸಮ್ಮೇಳನದ ಅಧ್ಯಕ್ಷ ಅರ್ಜುನ್ ಶೆಣೈ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಮಕ್ಕಳಲ್ಲಿ ಕನ್ನಡದ ಜಾಗೃತಿ ಮೂಡಿಸುವಂತೆ, ಅವರ ಪೋಷಕರಲ್ಲಿ ಕನ್ನಡ ಕುರಿತ ದೃಷ್ಠಿಕೋನವು ಬದಲಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಡಾ.ಎಂ ಮೋಹನ ಆಳ್ವ ಉಪಸ್ಥಿತರಿದ್ದರು. ಇದೇ ವೇಳೆ ಸಾಹಿತ್ಯ, ಸಂಸ್ಕೃತಿ, ಸಂಘಟನೆಗಾಗಿ ಮುರಳಿ ಕಡೇಕಾರ್, ಶೈಕ್ಷಣಿಕ ಸಾಂಸ್ಕೃತಿಕ ಸಾಧನೆಗಾಗಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಬಾಲಪ್ರತಿಭೆ ವಂಶಿ ರತ್ನಾಕುಮಾರ್ ಅವರಿಗೆ 2017ನೇ ಸಾಲಿನ ಆಳ್ವಾಸ್ ವಿದ್ಯಾರ್ಥಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನ 30 ರಂದು ಗುರುವಾರ ಸಂಜೆ ಮಂಡ್ರುದೆಗುತ್ತು ರಾಮಮೋಹನ ರೈ ಆವರಣದಲ್ಲಿನ ಕೃಷಿ ಸಿರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಗೈರು ಹಾಜರಾಗೋದು ಬಹುತೇಕ ಖಚಿತವಾಗಿದೆ. ದೆಹಲಿಯಲ್ಲಿನ ತುರ್ತು ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗವಹಿಸುತ್ತಿದ್ದು, ಕೃಷಿ ಸಿರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಗೈರುಹಾಜರಾಗುತ್ತಿರುವುದಾಗಿ ಮೂಲಗಳು ಹೇಳಿವೆ.