ಮಂಗಳೂರು, ಅ.16(DaijiworldNews/AA): ಇಲ್ಲಿನ ಸ್ಟೇಟ್ ಬ್ಯಾಂಕ್ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಬಳಿ ಖಾಸಗಿ ಬಸ್ ಕಂಡಕ್ಟರ್ ಮೃತದೇಹ ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೃತರನ್ನು ರಾಜೇಶ್(30) ಎಂದು ಗುರುತಿಸಲಾಗಿದೆ.
ರಾಜೇಶ್ ಅವರು ಮಂಗಳೂರು ಮತ್ತು ವಿಟ್ಲದ ನಡುವೆ ಸಂಚರಿಸುವ ಖಾಸಗಿ ಬಸ್ನಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಯಾವುದೋ ವಿಚಾರಕ್ಕೆ ಗಲಾಟೆಯಾಗಿ ಅಥವಾ ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ರಾಜೇಶ್ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ರಾಜೇಶ್ ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವುದರಿಂದ ಅವರ ದೇಹಕ್ಕೆ ತೀವ್ರ ಗಾಯವಾಗಿದೆ. ಮೃತದೇಹವನ್ನು ವೆನ್ಲಾಕ್ ಶವಾಗಾರದಲ್ಲಿರಿಸಲಾಗಿದೆ. ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.
ರಾಜೇಶ್ ಅವರು ಪ್ರತೀ ವರ್ಷವೂ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮಾಲೆ ಧರಿಸಿ ಹೋಗುತ್ತಿದ್ದರು. ಅವರು ಸರಳ ಸ್ವಭಾವದವರಾಗಿದ್ದು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು ಎಂದು ಸಹೋದ್ಯೋಗಿ ಮಿತ್ರರು ತಿಳಿಸಿದ್ದಾರೆ.