ಉಡುಪಿ, ಅ.16(DaijiworldNews/AA): ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ 40 ಕೆ.ಜಿ. ಪಟಾಕಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಉಡುಪಿ ನಗರದ ಜಿಟಿಎಸ್ ಶಾಲೆಯ ಎದುರಿನ ವಿದ್ಯಾಜ್ಯೋತಿ ಕಟ್ಟಡದಲ್ಲಿರುವ ಕಬ್ರಾಲ್ ಗನ್ ಹೌಸ್ ನಡೆದಿದೆ.
ಉಡುಪಿ ನಗರ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ಅವರು ನೀಡಿದ ಸುಳಿವಿನ ಮೇರೆಗೆ ಕಬ್ರಾಲ್ ಗನ್ ಹೌಸ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ಪಟಾಕಿಗಳ ದಾಸ್ತಾನು ಪತ್ತೆಯಾಗಿದೆ.
ದಾಳಿ ವೇಳೆ ಸ್ಥಳದಲ್ಲಿದ್ದ ರೊನಾಲ್ಡ್ ಜಿ ಕ್ಯಾಬ್ರಾಲ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಖರೀದಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಬಳಿಕ ಪೊಲೀಸರು ಆವರಣದಲ್ಲಿದ್ದ ಒಟ್ಟು 40 ಕೆ.ಜಿ. ಪಟಾಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ರೊನಾಲ್ಡ್ ಜಿ. ಕ್ಯಾಬ್ರಾಲ್ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಈ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿದ್ದು, ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ಇನ್ನು ಪರವಾನಗಿ ಇಲ್ಲದಿರುವುದರಿಂದ ಈ ಸ್ಫೋಟಕಗಳ ಶೇಖರಣೆಯು ಕಾನೂನುಬಾಹಿರ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.