ಬಂಟ್ವಾಳ, ಅ.17(DaijiworldNews/AA): ತುಳುನಾಡಿನ ಜನಪದ ಕ್ರೀಡೆಗಳಲ್ಲಿ ಕಂಬಳವೂ ಒಂದು, ಕರಾವಳಿಯಲ್ಲಿ ಪ್ರತೀವರ್ಷ ವಿವಿಧ ಕಂಬಳಸಮಿತಿಗಳು ಕಂಬಳ ವನ್ನು ಆಯೋಜಿಸುತ್ತಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿಯೂ ಕಂಬಳ ಆಯೋಜನೆಯಾಗಿ ದೇಶದ ಗಮನ ಸೆಳೆದಿತ್ತು. ಇದೀಗ ಬಂಟ್ವಾಳ ತಾಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ತನ್ನ ಪಬ್ಲಿಕ್ ಇಮೇಜ್ ಕಾರ್ಯಕ್ರಮವಾಗಿ ಮರಿಕೋಣಗಳಿಗಾಗಿ "ರೋಟರಿ ಕಂಬಳ"ವನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದೆ.
ಅ.19 ರ ಶನಿವಾರದಂದು ಸಿದ್ಧಕಟ್ಟೆ ಕೊಡಂಗೆಯ ವೀರವಿಕ್ರಮ ಕಂಬಳ ಸಮಿತಿ ಪ್ರತೀವರ್ಷ ಆಯೋಜಿಸುವ ಕಂಬಳ ಕರೆಯಲ್ಲಿ ಈ ರೋಟರಿ ಕಂಬಳ ನಡೆಯಲಿದ್ದು ಕುತೂಹಲ ಗರಿಗೆದರಿದೆ. ಸೇವಾ ಕಾರ್ಯಕ್ರಮಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ರೋಟರಿಯ ಕಾಳಜಿ ಜನಸಮೂಹಕ್ಕೆ ತಲುಪಬೇಕು ಎನ್ನುವುದು ರೋಟರಿ ಪಬ್ಲಿಕ್ ಇಮೇಜ್ ನ ಮುಖ್ಯ ಆಶಯ. ಇದರಂತೆ ತುಳುನಾಡಿನ ವಿಶೇಷ ಜನಾಕರ್ಷಣೆಯ ಕಂಬಳವನ್ನು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಆಯೋಜಿಸುವ ಮೂಲಕ ಇದೀಗ ಎಲ್ಲರ ಗಮನಸೆಳೆದಿದೆ.
ಕಂಬಳ ಯಜಮಾನರ ನೇತೃತ್ವ..
ಸಾಮಾನ್ಯವಾಗಿ ನಡೆಯುವ ಕಂಬಳ ಕೂಟದ ಮೇಲುಸ್ತುವಾರಿಯನ್ನು ಸಂ ಬಂಧಿಸಿದ ಕಂಬಳ ಸಮಿತಿ ವಹಿಸಿಕೊಂಡು, ಜಿಲ್ಲಾ ಕಂಬಳ ಸಮಿತಿಯ ಮಾರ್ಗದರ್ಶನದಲ್ಲಿ ಕಂಬಳ ನಡೆಯುತ್ತದೆ. ಆದರೆ ಇಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ನ ಸ್ಥಾಪಕಾಧ್ಯಕ್ಷರಾಗಿರುವ ಕಂಬಳಕೋಣದ ಯಜಮಾನ ಅವಿಲ್ ಮಿನೇಜಸ್ ಅವರ ನೇತೃತ್ವದಲ್ಲಿ ಈ ಕಂಬಳ ಕೂಟದ ಆಯೋಜನೆ ಮಾಡಲಾಗಿದೆ. ಪ್ರಸ್ತುತ ಕಾರ್ಯದರ್ಶಿಯಾಗಿರುವ ರಾಜೇಶ್ ಶೆಟ್ಟಿ ಸೀತಾಳ ರೂ ಕಂಬಳ ಕೋಣಗಳ ಯಜಮಾನರಾಗಿರುವುದು, ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಕೋಶಾಧಿಕಾರಿ ರಾಘವೇಂದ್ರ ಭಟ್ ಅವರೂ ಕೂಡ ವಿವಿಧ ಕಂಬಳ ಸಮಿತಿಯ ನೇತೃತ್ವ ವಹಿಸಿದ ಅನುಭವ ಹೊಂದಿರುವುದು ಈ ಕೂಟಕ್ಕೆ ಶಕ್ತಿ ತಂದಿದೆ. ರೋಟರಿ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಕರಾವಳಿ ಜಾನಪದ ಕ್ರೀಡೆ ಕಂಬಳ ಕೂಟದಲ್ಲಿ ಗುಣಮಟ್ಟದ ಮತ್ತಷ್ಟು ಓಟದ ಕೋಣಗಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಸಬ್ ಜ್ಯೂನಿಯರ್ ಹಗ್ಗ ಮತ್ತು ನೇಗಿಲು ವಿಭಾಗದ ಕೋಣಗಳ 'ಕಂಬಳ ಕೂಟ' ಆಯೋಜಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಅಧ್ಯಕ್ಷ ಸುರೇಶ್ ಶೆಟ್ಟಿ ಅವರು, ಜಿಲ್ಲೆಯಲ್ಲಿ ನಡೆಯುವ ಎಲ್ಲಾ ಕಂಬಳ ಕೂಟಗಳಲ್ಲಿ ಸಬ್ ಜ್ಯೂನಿಯರ್ ವಿಭಾಗದ ಕೋಣಗಳಿಗೆ ಸ್ಪರ್ಧೆಗೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂಬ ಅಂಶವನ್ನು ಮನಗಂಡು ಸ್ವತಃ ಓಟದ ಕೋಣಗಳ ಮಾಲೀಕರಾದ ರೊ.ಅವಿಲ್ ಮಿನೇಜಸ್ ಇವರ ನೇತೃತ್ವದಲ್ಲಿ ಈ ವಿನೂತನ ಕಂಬಳ ಕೂಟ ಆಯೋಜನೆಗೊಂಡಿದೆ. ಸಬ್ ಜ್ಯೂನಿಯರ್ ವಿಭಾಗದ ಓಟದ ಕೋಣಗಳಿಗೆ ಸ್ಪರ್ಧೆಗೆ ಅವಕಾಶ ನೀಡಿದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳನ್ನು ಸಾಕುವುದರ ಜೊತೆಗೆ ಸಾಂಪ್ರ್ರದಾಯಿಕ ಮತ್ತು ಸಾವಯವ ಕೃಷಿಗೆ ಬೆಂಬಲ ನೀಡುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಚಿನ್ನ ಬಹುಮಾನ:
ಸಬ್ ಜ್ಯೂನಿಯರ್ ವಿಭಾಗದ ಕಂಬಳ ಕೂಟದಲ್ಲಿ ವಿಜೇತ ಕೋಣಗಳ ಮಾಲೀಕರಿಗೆ ಪ್ರಥಮ ಬಾರಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಸಬ್ ಜ್ಯೂನಿಯರ್ ಹಗ್ಗದ ವಿಭಾಗದಲ್ಲಿ ಹಾಗೂ ಸಬ್ ಜ್ಯೂನಿಯರ್ ನೇಗಿಲು ವಿಭಾಗದಲ್ಲಿಯೂ ಪ್ರಥಮ ಬಹುಮಾನ-ಅರ್ಧ ಪವನ್ ಚಿನ್ನದ ಪದಕ, ದ್ವಿತೀಯ ಬಹುಮಾನ- ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನ ತಲಾ ರೂ 5 ಸಾವಿರದಂತೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಎಲ್ಲಾ ವಿಭಾಗದ ವಿಜೇತ ಕೋಣಗಳ ಮಾಲೀಕರಿಗೆ ಹಾಗೂ ಓಟಗಾರರಿಗೆ ವಿಶೇಷ ಟ್ರೋಫಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಸುರೇಶ್ ಶೆಟ್ಟಿ ವಿವರ ನೀಡಿದರು.
ಬೆಳಗ್ಗಿನಿಂದ ರಾತ್ರಿವರೆಗೆ...
ಸಬ್ ಜ್ಯೂನಿಯರ್ ವಿಭಾಗದ ರೋಟರಿ ಕಂಬಳ ಕೂಟವು ಶನಿವಾರ ಬೆಳಿಗ್ಗೆ ಗಂಟೆ 8:30ಕ್ಕೆ ಆರಂಭಗೊಂಡು ರಾತ್ರಿ ಗಂಟೆ 10:30ಕ್ಕೆ ಮುಕ್ತಾಯಗೊಳ್ಳಲಿದೆ. ಎಲ್ಲಾ ಕಂಬಳಗಳಂತೆ ಇಲ್ಲಿಯೂ ಸಕಲ ವ್ಯವಸ್ಥೆಯನ್ನು ಮಾಡಲಾಗಿದ್ದು, ಮರಿಕೋಣಗಳಾಗಿರುವ ಹಿನ್ನೆಲೆಯಲ್ಲಿ ಕರೆಯ ಉದ್ದವನ್ನು ಕಡಿಮೆಗೊಳಿಸಲಾಗಿದೆ. ಉಳಿದಂತೆ ಸೆನ್ಸಾರ್, ಹೊನಲು ಬೆಳಕು, ಥರ್ಡ್ ಅಂಪೇರ್ ನೇರಪ್ರಸಾರ ಎಲ್ಲವನ್ನೂ ವ್ಯವಸ್ಥೆಗೊಳಿಸಲಾಗಿದೆ. ಸಿದ್ಧಕಟ್ಟೆ ಕೊಡಂಗೆ ವೀರ- ವಿಕ್ರಮ ಜೋಡುಕರೆ ಬಯಲು ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ, ಕಾರ್ಯದರ್ಶಿ ಶಶಿಧರ ಶೆಟ್ಟಿ ಕಲ್ಲಾಪು, ವಾಮದಪದವು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ, ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ಬಿನ ಉಪಾಧ್ಯಕ್ಷ ವಿಜಯ ಫೆರ್ನಾಂಡಿಸ್, ಸದಸ್ಯರಾದ ಕೆ.ರಮೇಶ ನಾಯಕ್ ರಾಯಿ, ಪ್ರಭಾಕರ ಪ್ರಭು ಕರ್ಪೆ, ಮೋಹನ್ ಕೆ.ಶ್ರೀಯಾನ್ ರಾಯಿ, ಸ್ಥಳದಾನಿ ಚಂದ್ರಶೇಖರ ಕೊಡಂಗೆ, ಜನಾರ್ದನ ಬಂಗೇರ ಮತ್ತಿತರರು ಕಂಬಳ ಕೂಟದ ಆಯೋಜನೆಗೆ ವಿಶೇಷ ಶ್ರಮವಹಿಸುತ್ತಿದ್ದಾರೆ.