ಸುಳ್ಯ, ಅ.17(DaijiworldNews/AA): ಗುತ್ತಿಗಾರು ಮಡಪ್ಪಾಡಿ ಗ್ರಾಮದ ನಡುಬೆಟ್ಟಿನಲ್ಲಿ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಅನಾರೋಗ್ಯ ಪೀಡಿತ ವೃದ್ಧರೊಬ್ಬರನ್ನು ಯುವಕರು ಕುರ್ಚಿಯಲ್ಲಿ ಕೂರಿಸಿ ಆಸ್ಪತ್ರೆಗೆ ಹೊತ್ತೊಯ್ದಿರುವ ಘಟನೆ ನಡೆದಿದೆ.
ನಡುಬೆಟ್ಟು ಭಾಗದಲ್ಲಿ ಸುಮಾರು 14 ಮನೆಗಳಿದ್ದು, ಈ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ಯಾವುದೇ ವಾಹನಗಳ ಚಾಲಕರು ಈ ಮನೆಗಳಿಗೆ ಬರಲು ನಿರಾಕರಿಸುತ್ತಾರೆ.
ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ಗುಂಡಿಗಳು ನಿರ್ಮಾಣವಾಗಿದೆ. ಈ ಕಾರಣದಿಂದಲೇ ಬೇಸಗೆಯಲ್ಲಿ ಮಾತ್ರ ಜೀಪು, ಪಿಕಪ್ ಗಳು ಮಾತ್ರ ಸಂಚರಿಸುತ್ತವೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಯಾವ ವಾಹನಗಳೂ ಸಂಚರಿಸುವುದಿಲ್ಲ. ಹೀಗಾಗಿ ಇಲ್ಲಿ ವಾಸಿಸುವ ಜನರು ಎಲ್ಲ ರೀತಿಯ ಕೃಷಿ ಉತ್ಪನ್ನ ಮತ್ತು ದಿನ ನಿತ್ಯಕ್ಕೆ ಬೇಕಾಗುವ ದಿನಸಿ ಸಾಮಾಗ್ರಿಗಳನ್ನು ಹೊತ್ತುಕೊಂಡೇ ಸಾಗುತ್ತಾರೆ.