ಉಡುಪಿ, ಜೂ 02: (Daijiworld News/SM): ಕೇಂದ್ರದಲ್ಲಿ ಮೋದಿ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಗೋರಕ್ಷಣೆಯ ಕುರಿತಂತೆ ಕೇಂದ್ರ ಸರಕಾರದಿಂದ ಇಡೀ ದೆಶಕ್ಕೆ ಅನ್ವಯವಾಗುವ ರೀತಿಯಲ್ಲಿ ಕಾನೂನು ಜಾರಿಯಾಗಲಿ ಎಂದು ಪೇಜಾವರ ಶ್ರೀ ವಿಶ್ವೇಷತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದ್ದಾರೆ.
ಉಡುಪಿ ಪರ್ಯಾಯ ಶ್ರೀ ಪಲಿಮಾರು ಮಠದ ಯೋಜನೆಯಾದ ಸುವರ್ಣ ಗೋಪುರ ಶಿಖರ ಪ್ರತಿಷ್ಟಾನ ಮತ್ತು ಬ್ರಹ್ಮಕಲಶಾಭೀಷೇಕ ಮಹೋತ್ಸವ, ದೇಶಿಯ ಗೋವಿನ ತಳಿಗಳ ಸಮ್ಮಿಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆರ್ಥಿಕ ದೃಷ್ಟಿಯಿಂದ ಮಾತ್ರವಲ್ಲ, ಧಾರ್ಮಿಕ ದೃಷ್ಟಿಯಿಂದ ಮಾತ್ರವಲ್ಲ, ಮಾನವೀಯ ದೃಷ್ಟಿಯಿಂದಲೂ ಗೋವುಗಳ ರಕ್ಷಣೆ ಅತೀ ಅಗತ್ಯ ಎಂದ ಅವರು ಹಾಲು ಕೊಡುವ ಗೋವನ್ನು ಕಡಿದು ತಿನ್ನುವ ಮನಸ್ಸು ಯಾರಿಗೆ ಬರುತ್ತದೆಯೋ ಅವರು ಮಾನವರೇ ಅಲ್ಲ, ರಾಕ್ಷಸವರ್ಗಕ್ಕೆ ಸೇರಿದವರು. ಗೋಹತ್ಯೆ ಮಾಡಿ ಸೇವಿಸುವುದು ಅತ್ಯಂತ ಹೇಯಕಾರ್ಯ ಎಂದರು.
ಕಾರ್ಯಕ್ರಮದಲ್ಲಿ ಉಡುಪಿಯ ನೀಲಾವರ ಗೋಶಾಲೆ, ಅದಮಾರು ಮಠ ಗೋಶಾಲೆ, ಕೃಷ್ಣ ಮಠದ ಗೋ ಶಾಲೆ, ಸೋದೆ ಮಠ ಗೋ ಶಾಲೆ ಹಾಗೂ ಉಡುಪಿ ಮಂಗಳೂರಿನ ಇತರ ಗೋಶಾಲೆಗಳಲ್ಲಿರು ಭಾರತೀಯ ದೇಸಿ ತಳಿಯ ಗೋವುಗಳನ್ನು ಪ್ರದರ್ಶನಕ್ಕೆ ತರಲಾಗಿತ್ತು.
ಪಲಿಮಾರು ಮಠದ ಪರ್ಯಾಯ ಶ್ರೀ ವಿದ್ಯಾದೀಶತೀರ್ಥರು, ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀ ವಿದ್ಯಾರಾಜೇಶ್ವರತೀರ್ಥರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿಗಳಾದ, ಶ್ರೀ ಈಶಪ್ರಿಯತೀರ್ಥ ಸ್ವಾಮಿಜಿ ಸೇರಿದಂತೆ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.