ಉಡುಪಿ, ಅ.17(DaijiworldNews/AA): ರೆಂಜಾಳ ನಾಯಕ ಮನೆತನದ ಉದ್ಯಮಿ ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್(76) ಅವರು ಅಕ್ಟೋಬರ್ 16 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ರೆಂಜಾಳ ಲಕ್ಷ್ಮಣ ನಾರಾಯಣ ನಾಯಕ್ ಅವರು, 55 ವರ್ಷಗಳಿಂದ ಕಿರಾಣಿ ಅಂಗಡಿ ಮತ್ತು ಹೋಟೆಲ್ ಅನ್ನು ಯಶಸ್ವಿಯಾಗಿ ನಿರ್ವಹಿಸಿ, "ರೆಂಜಾಳ ಲಕ್ಷ್ಮಣೇರ್" ಬಿರುದು ಗಳಿಸಿ ಹೆಸರುವಾಸಿಯಾಗಿದ್ದರು. ರೆಂಜಾಳ ಲಕ್ಷ್ಮಣ ಅವರು ತಮ್ಮ ವ್ಯವಹಾರದಿಂದಷ್ಟೇ ಅಲ್ಲದೇ ಕೃಷಿ ಮತ್ತು ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿ ಗುರುತಿಸಲ್ಪಟ್ಟವರು.
ಕುಗ್ರಾಮದಲ್ಲಿ ಆಸ್ಪತ್ರೆಯಿಲ್ಲದೆ ದೂರದ ತಾಲೂಕಿನ ದೊಡ್ಡ ಆಸ್ಪತ್ರೆಗೆ ಹೋಗಬೇಕಾದ ಕಾಲದಿಂದಲೂ ರೆಂಜಾಳ ಲಕ್ಷ್ಮಣ ಅವರು ನಾಟಿ ಔಷಧಿಯನ್ನು ಅದರಲ್ಲೂ ವಿಶೇಷತಃ ಜಾಂಡಿಸ್ (ಕಾಮಾಲೆ) ರೋಗ, ಸರ್ಪಸುತ್ತಿನಂತಹ ಕಾಯಿಲೆಗೆ ದೀನ ದುರ್ಬಲರಿಗೆ ಉಚಿತವಾಗಿ ನೀಡುತ್ತಿದ್ದರು. ಇನ್ನು ತಲೆಮಾರುಗಳಿಂದ ರೆಂಜಾಳ ಮಾರಿಗುಡಿಯಲ್ಲಿ ಸೇವಾರೂಪದಲ್ಲಿ ನಿರಂತರ ದೇವಿಯ ನಿತ್ಯಸೇವೆಯನ್ನು ನಿರಪೇಕ್ಷೆ, ನಿಸ್ವಾರ್ಥರೂಪದಲ್ಲಿ ಸಲ್ಲಿಸಿದಕ್ಕೆ ದೇವಳದ ಜೀರ್ಣೋದ್ಧಾರದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು.
ರೆಂಜಾಳ ಲಕ್ಷ್ಮಣ ಅವರು ಕುಗ್ರಾಮದಲ್ಲಿ ಶಾಲೆಯೇ ಇಲ್ಲದ ಸಂದರ್ಭದಲ್ಲಿ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂದು ಸರ್ಕಾರಿ ಅಂಗನವಾಡಿ ನಿರ್ಮಿಸಲು ತಮ್ಮ ಸ್ವಂತ ಜಮೀನು ನೀಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಿದ್ದರು. ರೆಂಜಾಳ ಲಕ್ಷ್ಮಣ ಅವರು ತಮ್ಮ ಪತ್ನಿ, ಇಬ್ಬರು ಪುತ್ರರು, ಒಬ್ಬ ಪುತ್ರಿ, ಮೊಮ್ಮಕ್ಕಳು ಸಹಿತ ಅಪಾರ ಕುಟುಂಬವನ್ನು ಅಗಲಿದ್ದಾರೆ.