ಉಳ್ಳಾಲ, ಅ.17(DaijiworldNews/AA): ಎರಡು ಕಾರುಗಳ ನಡುವೆ ನಡೆದ ಅಪಘಾತ ಪ್ರಕರಣದ ವಿಚಾರಣೆ ವೇಳೆ ಇನ್ಸ್ಪೆಕ್ಟರ್ ಕೊಠಡಿಯೊಳಗೆಯೇ ಕೇರಳದ ಯುವಕನೊಬ್ಬ ಹಿಂದೂ ಸಂಘಟನೆಯ ಮುಖಂಡನ ಮೇಲೆ ಹಲ್ಲೆ ನಡೆಸಿದ್ದು, ಘಟನೆಗೆ ಸಂಬಂಧ ಹಿಂದೂ ಸಂಘಟನೆಯ ಕಾರ್ಯಕರ್ತರು ನಡುರಾತ್ರಿಯೇ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಇದೀಗ ಹಲ್ಲೆ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಜರಂಗದಳದ ಉಳ್ಳಾಲ ನಗರ, ಪ್ರಖಂಡ ಸಂಯೋಜಕ ಅರ್ಜುನ್ ಮಾಡೂರು ಅವರ ಮೇಲೆ ಕಾಸರಗೋಡು ಜಿಲ್ಲೆಯ ಹೊಸಂಗಡಿ, ಕಡಂಬಾರು ಸರಕಾರಿ ಶಾಲೆಯ ಬಳಿಯ ನಿವಾಸಿ ಮಹಮ್ಮದ್ ಆಸಿಫ್(33) ಎಂಬಾತ ಹಲ್ಲೆ ನಡೆಸಿದ್ದನು. ಇದೀಗ ಮಹಮ್ಮದ್ ಆಸಿಫ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ:
ತೊಕ್ಕೊಟ್ಟುವಿನ ಮೇಲ್ಸೇತುವೆಯಲ್ಲಿ ಅ.16ರ ರಾತ್ರಿ ಕುಂಪಲದ ಶರತ್ ಮತ್ತು ಕೇರಳದ ಇಬ್ರಾಹಿಂ ಖಲೀಲ್ ಅವರ ಕಾರುಗಳ ಮಧ್ಯೆ ಸಣ್ಣ ಅಪಘಾತ ಸಂಭವಿಸಿತ್ತು. ಈ ವಿಚಾರವಾಗಿ ಖಲೀಲ್ ಮತ್ತು ಆತನ ಸಹೋದರ ಅಸಿಫ್, ಶರತ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಹಲ್ಲೆ ವಿಚಾರವಾಗಿ ಶರತ್ ಅವರ ಸ್ನೇಹಿತ ಅರ್ಜುನ್ ಮಾಡೂರು ಪೊಲೀಸ್ ಠಾಣೆಗೆ ಬಂದಿದ್ದರು. ಈ ಘಟನೆ ಸಂಬಂಧ ಮಾತುಕತೆ ನಡೆಸುತ್ತಿದ್ದ ವೇಳೆ ಏಕಾಏಕಿ ಒಳ ನುಗ್ಗಿದ ಆರೋಪಿ ಆಸಿಫ್, ಅರ್ಜುನ್ ಮಾಡೂರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಳಿಕ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೊರಗಡೆ ತೆರಳಿದ್ದರು ಎನ್ನಲಾಗಿದೆ.
ಹಲ್ಲೆ ಸಡೆಸುತ್ತಿದ್ದ ವೇಳೆ ಅರ್ಜುನ್ ಸ್ನೇಹಿತರು ಆಸಿಫ್ ನನ್ನು ತಡೆದಿದ್ದು, ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಘಟನೆಯ ಸಂಪೂರ್ಣ ದೃಶ್ಯ ಠಾಣಾ ಇನ್ಸ್ ಪೆಕ್ಟರ್ ಅವರ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಹಲ್ಲೆಯಿಂದಾಗಿ ಅರ್ಜುನ್ ಅವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದ ಆಸಿಫ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
ಅರ್ಜುನ್ ಅವರ ಮೇಲೆ ನಡೆದ ಹಲ್ಲೆ ವಿಚಾರ ತಿಳುಯುತ್ತಿದ್ದಂತೆ ಮಧ್ಯರಾತ್ರಿ ಹಿಂದೂ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದರು. ಅರ್ಜುನ್ ಅವರ ಮೇಲೆ ಹಲ್ಲೆಗೈದ ಆರೋಪಿ ಆಸಿಫ್ ನನ್ನು ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ್ದರು. ಈ ವೇಳೆ ಸ್ಥಳಕ್ಕಾಗಮಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಧನ್ಯ ನಾಯಕ್ ಅವರು ಠಾಣೆಯ ಸುತ್ತಲೂ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಹಲ್ಲೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅರುಣ್ ಪುತ್ತಿಲ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಶ್ವ ಹಿಂದೂ ಪರಿಷತ್ ಮುಖಂಡ ಗೋಪಾಲ ಕುತ್ತಾರು ಅವರು ಆರೋಪಿ ಆಸಿಫ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.