ಕಾರ್ಕಳ, ಜೂ 02 (Daijiworld News/SM): ಐತಿಹಾಸಿಕ ರಾಮಸಮುದ್ರ ಪರಿಸರದಲ್ಲಿ ಸ್ವಚ್ಚತೆ ಕಾಪಾಡುವ ಕುರಿತು ದಾಯ್ಜಿವರ್ಲ್ಡ್ ವಾಹಿನಿ ತೋರಿದ ಕಾಳಜಿಗೆ ನಾಗರಿಕರಿಂದ ವ್ಯಾಪಕ ಸ್ಪಂದನೆ ಸಿಕ್ಕಿದೆ. ಇದಕ್ಕೆ ಇಂಬು ನೀಡುವಂತೆ ರವಿವಾರ ಬೆಳಿಗ್ಗೆ ನೂರಾರು ಸಂಖ್ಯೆಯಲ್ಲಿ ಪರಿಸರ ಪ್ರಿಯರು ರಾಮಸಮುದ್ರ ಪರಿಸರದಲ್ಲಿ ಅಗಮಿಸಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಮಧ್ಯಾಹ್ನ 12.30ರ ವರೆಗೆ ಸ್ವಚ್ಚತಾ ಕಾರ್ಯ ನಡೆಸಿದ್ದು, ಬರೋಬರಿ 4 ಲೋಡ್ ಟಿಪ್ಪರ್ ತ್ಯಾಜ್ಯವನ್ನು ರಾಮಸಮುದ್ರ ಪರಿಸರದಿಂದ ಸಂಗ್ರಹಿಸಿ ಕರಿಯಕಲ್ಲು ಡಂಪಿಂಗ್ ಯಾರ್ಡ್ಗೆ ಸಾಗಿಸಲಾಗಿದೆ. ದೇವಳದ ಕೊಡಿಮರ, ದೋಣಿ, ನಾಗನಕಲ್ಲುಗಳು, ಫೋಟೋಗಳು, ಪ್ಲಾಸ್ಟಿಕ್ ಕವರ್ಗಳು, ಬಿಸ್ಲೇರಿ ಬಾಟಲ್ಗಳು, ಬಿಯರ್ ಬಾಟಲ್, ಇತರ ಮಧ್ಯದ ಬಾಟಲ್ಗಳು, ಬಟ್ಟೆ-ಬರೆಗಳು, ಪಿಂಡ ಪ್ರದಾನಕ್ಕೆ ಉಪಯೋಗಿಸಿದ ಅಸಂಕ್ಯಾತ ಮಡಿಕೆಗಳು, ಕಟ್ಟಿಗೆ, ಕಸಗಳು ಇದರಲ್ಲಿ ಒಳಗೊಂಡಿತ್ತು.
ಸಾಥ್ ನೀಡಿತ ಇಲಾಖೆ ಹಾಗೂ ಸಂಘ-ಸಂಸ್ಥೆಗಳು
ಕಾರ್ಕಳ ಪುರಸಭೆಯ ಸಿಬ್ಬಂದಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು, ನಕ್ಸಲ್ ನಿಗ್ರಹ ದಳ ಸಿಬ್ಬಂದಿಗಳು, ಮಣಿಪುರ ಗೈಡ್ಸ್ ಸದಸ್ಯರು, ವಿನಾಯಕ ಫ್ರೆಂಡ್ಸ್ ಸದಸ್ಯರು ಸೇರಿದಂತೆ ಇತರ ಸಂಘ ಸಂಸ್ಥೆಗಳು ರಾಮಸಮುದ್ರ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದರು. ಕಾರ್ಕಳ ಪುರಸಭಾ ವತಿಯಿಂದ ಸಿಬ್ಬಂದಿಗಳು ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡಿದ್ದಲ್ಲದೇ, ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಯಂ ಸೇವಕರಿಗೆ ಕೈಚೀಲ, ಹಾರೆ-ಪಿಕ್ಕಾಸು, ಪೊರಕೆ, ತ್ಯಾಜ್ಯ ಸಾಗಾಟದ ವಾಹನ ವ್ಯವಸ್ಥೆ ಕಲ್ಪಿಸಿದೆ. ವಿವಿಧ ದಾನಿಗಳ ಪ್ರಾಯೋಕತ್ವದಲ್ಲಿ ಫಲಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶಾಸಕ ಸುನೀಲ್ ಕುಮಾರ್ ಭೇಟಿ
ರಾಮಸಮುದ್ರ ಪರಿಸರಕ್ಕೆ ಶಾಸಕ ಹಾಗೂ ವಿಧಾನ ಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನೀಲ್ ಕುಮಾರ್ ಭೇಟಿ ನೀಡಿದರು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ರಾಮಸಮುದ್ರ ಅಭಿವೃದ್ಧಿಯ ಬಗ್ಗೆ ಯೋಜನೆಯ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ನೀರಿನ ಮೇಲ್ಭಾಗದಲ್ಲಿ ರಾಮಸಮುದ್ರದ ನೀರನ ಮಟ್ಟ ತಳ ಸೇರಿದ್ದು, ಇದೇ ಕೆರೆಯಿಂದ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರನ್ನು ಪೊರೈಕೆ ಮಾಡಲಾಗುತ್ತಿದೆ. ಆದುದರಿಂದಾಗಿ ರಾಮಸಮುದ್ರ ನೀರಿನ ಮೇಲ್ಭಾಗದಲ್ಲಿ ಮಾತ್ರ ಸ್ವಚ್ಚತಾ ಕಾರ್ಯ ನಡೆಸಲಾಗಿದೆ.