ಉಡುಪಿ, ಅ.17(DaijiworldNews/AA): ಬಹಳ ದಿನಗಳಿಂದ ವಿಳಂಬವಾಗಿದ್ದ ಸಂತೆಕಟ್ಟೆ ಅಂಡರ್ಪಾಸ್ನ ಎರಡನೇ ಹಂತದ ಕಾಮಗಾರಿಯು ಕಾರ್ಮಿಕರ ಹಾಗೂ ಯಂತ್ರೋಪಕರಣಗಳ ಗಣನೀಯ ಹೆಚ್ಚಳದಿಂದಾಗಿ ವೇಗ ಪಡೆದುಕೊಳ್ಳುತ್ತಿದೆ. ನಿರಂತರ ವಾಹನ ದಟ್ಟಣೆ ಹಾಗೂ ಮಳೆಯ ಹೊರತಾಗಿಯೂ ಅಂಡರ್ಪಾಸ್ನ ನಿರ್ಮಾಣ ಕಾರ್ಯವು ವೇಗವಾಗಿ ಸಾಗುತ್ತಿದ್ದು, ದ್ವಿಪಥಕ್ಕಾಗಿ 2025ರ ಆರಂಭದಲ್ಲಿ ಪರಿಷ್ಕೃತ ಗಡುವನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.
ಮೊದಲ ಹಂತದಲ್ಲಿ ದ್ವಿಪಥ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಆದರೆ ಈ ರಸ್ತೆಯಲ್ಲಿ ಶೀಘ್ರವೇ ಗುಂಡಿಗಳು ನಿರ್ಮಾಣವಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಕಾರ್ಮಿಕರು ಈ ರಸ್ತೆಯನ್ನು ದುರಸ್ತಿ ಮಾಡಿದಷ್ಟು, ನಿರಂತರ ವಾಹನ ಸಂಚಾರದಿಂದಾಗಿ ಮತ್ತೆ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತಿದೆ. ಇನ್ನು ಮಳೆಯಿಂದಾಗಿಯೂ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಇದರಿಂದಾಗಿ ಕೆಲವು ಪ್ರಗತಿ ನಿಧಾನಗತಿಯಲ್ಲಿ ಸಾಗುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರೊಂದಿಗೆ ಹಲವಾರು ಸುತ್ತಿನ ಸಭೆಗಳನ್ನು ನಡೆಸಿದ ಸ್ಥಳೀಯ ಸಂಸದರು ಮತ್ತು ಜಿಲ್ಲಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಅಂಡರ್ಪಾಸ್ ಕಾಮಗಾರಿಯ ವೇಗ ಗಣನೀಯವಾಗಿ ಹೆಚ್ಚಾಗಿದೆ. ಗುತ್ತಿಗೆದಾರರು, ಈ ಯೋಜನೆಯನ್ನು ಪೂರ್ಣಗೊಳಿಸುವ ಒತ್ತಡದಲ್ಲಿದ್ದು, ಈ ವರ್ಷದ ಅಂತ್ಯದ ವೇಳೆಗೆ ಎರಡನೇ ಹಂತವನ್ನು ಪೂರ್ಣಗೊಳಿಸಿ, 2025 ರ ಆರಂಭದಲ್ಲಿ ರಸ್ತೆಯು ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಎರಡನೇ ದ್ವಿಪಥ ರಸ್ತೆ, ಕೆಳಸೇತುವೆ ಭಾಗದ ಕಾಮಗಾರಿ ಭರದಿಂದ ಸಾಗಿದೆ. ಕಾರ್ಮಿಕರು ಪ್ರಸ್ತುತ ಮೇಲ್ಮಣ್ಣು ಮತ್ತು ಡಾಂಬರು ಕೆಡವುವತ್ತ ಗಮನಹರಿಸುತ್ತಿದ್ದಾರೆ. ಹಾಗೂ ಅಂಡರ್ಪಾಸ್ ತಡೆಗೋಡೆಯ ನಿರ್ಮಾಣವು ಪ್ರಭಾವಶಾಲಿ ವೇಗದಲ್ಲಿ ಪ್ರಗತಿಯಲ್ಲಿದೆ. ಬ್ರಹ್ಮಾವರದ ಕಡೆಯಿಂದ ಸುಮಾರು 100 ಮೀಟರ್ ತಡೆಗೋಡೆ ಪೂರ್ಣಗೊಂಡಿದ್ದು, ಇನ್ನೂ 25 ಮೀಟರ್ ಬಾಕಿ ಉಳಿದಿದೆ.
ನಿರ್ಮಾಣ ಕಾರ್ಯದಲ್ಲಿ ಕಾರ್ಮಿಕರ ಹಾಗೂ ಯಂತ್ರೋಪಕರಣಗಳ ಗಣನೀಯ ಹೆಚ್ಚಳದಿಂದಾಗಿ ಕಾಮಗಾರಿ ವೇಗವಾಗಿ ಸಾಗುತ್ತಿದೆ. ಹಿಂದೆ ಕೇವಲ 25-30 ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿಸಿಕೊಂಡಿದ್ದರೆ, ಈಗ 60 ಕ್ಕೂ ಹೆಚ್ಚು ಜನರು ಪ್ರತಿದಿನ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ, ಕಾರ್ಯಾಚರಣೆಯಲ್ಲಿರುವ ಜೆಸಿಬಿಗಳ ಸಂಖ್ಯೆಯು ಕೇವಲ ಒಂದರಿಂದ, ಮೂರು ಅಥವಾ ನಾಲ್ಕಕ್ಕೆ ಏರಿದೆ. ಇತ್ತೀಚಿನ ಯಂತ್ರೋಪಕರಣಗಳನ್ನು ರಸ್ತೆ ಕೆಡವುವಿಕೆ ಮತ್ತು ತಡೆಗೋಡೆ ನಿರ್ಮಾಣದಂತಹ ಕಾರ್ಯಗಳಿಗೆ ಬಳಸಲಾಗುತ್ತಿರುವುದರಿಂದ ಕಾಮಗಾರಿ ವೇಗ ಪಡೆದಿದೆ.
ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿರುವ ಬಂಡೆ ಒಡೆಯುವ ಕಾರ್ಯವೂ ವೇಗ ಪಡೆದುಕೊಂಡಿದೆ. ಸ್ಥಳದಲ್ಲಿ ದೊಡ್ಡ ಬಂಡೆಗಳು ಇರುವುದರಿಂದಾಗಿ, ಹಗಲಿನಲ್ಲಿ ಚಿಕ್ಕದಾದ, ನಿಶ್ಯಬ್ದವಾದ ಯಂತ್ರಗಳಿಂದ ಅವುಗಳನ್ನು ಒಡೆಯುವುದರಿಂದ ಕಾಮಗಾರಿ ನಿಧಾನಗೊಂಡಿತ್ತು. ಆದಾಗ್ಯೂ, ಇತ್ತೀಚೆಗೆ ಜಿಲ್ಲಾಡಳಿತವು ದೊಡ್ಡ ಉಪಕರಣಗಳನ್ನು ಬಳಸಿ ಬಂಡೆಗಳನ್ನು ಒಡೆಯಲು ಅನುಮತಿ ನೀಡಿರುವುದರಿಂದ ಕಾರ್ಮಿಕರಿಗೆ ದೊಡ್ಡ ಬಂಡೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಒಡೆಯಲು ಸಾಧ್ಯವಾಗಿದೆ. ಇನ್ನು ಅಧಿಕಾರಿಗಳ ಪ್ರಕಾರ, ಒಂದು ದೊಡ್ಡ ಬಂಡೆ ಮಾತ್ರ ಒಡೆಯಲು ಉಳಿದಿದೆ ಎನ್ನಲಾಗಿದೆ.
ಗುಂಡಿಗಳು, ಭಾರೀ ವಾಹನ ದಟ್ಟಣೆ ಮತ್ತು ಮಳೆ ಸಮಸ್ಯೆಗಳ ಹೊರತಾಗಿಯೂ, ಸಂತೆಕಟ್ಟೆ ಅಂಡರ್ಪಾಸ್ ನಿರ್ಮಾಣವು ಇತ್ತೀಚಿನ ವಾರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸಂಪನ್ಮೂಲಗಳ ಹೆಚ್ಚಿನ ನಿಯೋಜನೆಯೊಂದಿಗೆ, ಯೋಜನೆಯ ಉಳಿದ ಹಂತಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ಉಡುಪಿ ಭಾಗದಲ್ಲಿ ಪ್ರಯಾಣಿಕರಿಗೆ ಸುಗಮ ಮತ್ತು ಹೆಚ್ಚು ಪರಿಣಾಮಕಾರಿ ಮಾರ್ಗವನ್ನು ಒದಗಿಸಲಾಗುತ್ತದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.