ಮಂಗಳೂರು, ಅ.18(DaijiworldNews/AA): ಹೊಸಬೆಟ್ಟು ಬಳಿಯ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಯುವಕನನ್ನು ಸುರತ್ಕಲ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತನನ್ನು ಬಿಹಾರ ಮೂಲದ ಸೋನಿ (27) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ 30 ಸಾವಿರ ಮೌಲ್ಯದ 1.5 ಕೆಜಿ ಗಾಂಜಾ, ೧೫ ಸಾವಿರ ಮೌಲ್ಯದ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನು ಹೊಸಬೆಟ್ಟು ಬಳಿಯ ಬೀಚ್ ರಸ್ತೆಯಲ್ಲಿ ಭುಜದ ಮೇಲೆ ಬ್ಯಾಗ್ ಹಾಕಿಕೊಂಡು ನಡೆದುಕೊಂಡು ಹೋಗುತ್ತಿದ್ದನು. ಈ ವೇಳೆ ಪೊಲೀಸ್ ಜೀಪ್ ನೋಡಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಆತನನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ, ತನ್ನ ಬ್ಯಾಗ್ ನಲ್ಲಿ ಗಾಂಜಾ ಇದ್ದು, ಅದಕ್ಕಾಗಿ ಪೊಲೀಸರನ್ನು ಕಂಡಾಗ ಓಡಿ ಪರಾರಿಯಾಗಲು ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಕಲಂ 8 20(ಬಿ) (6), ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.