ಪುತ್ತೂರು, ಅ.18(DaijiworldNews/AA): ದ.ಕ.ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರದ ತವರೂರಾಗಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಿಸ್ತು ಬದ್ದವಾದ ವ್ಯವಹಾರ ನಡೆಸುತ್ತಾರೆ. ಹಾಗಾಗಿ ಉಭಯ ಜಿಲ್ಲೆಯ ಸಹಕಾರಿ ಕ್ಷೇತ್ರ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದು, ದೇಶಕ್ಕೆ ಸಂದೇಶ ನೀಡಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಪುತ್ತೂರಿನ ಪಡೀಲ್ ನಲ್ಲಿರುವ ವಿಘ್ನೇಶ್ವರ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭವಾದ ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ಪುತ್ತೂರು ಶಾಖೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕ್ ಮೂಲಕ ಉದ್ಯಮ ಕ್ಷೇತ್ರದಲ್ಲಿ ಅನೇಕರಿಗೆ ಜೀವನ ನೀಡಿದೆ. ಮತ್ತು ಆರ್ಥಿಕವಾಗಿ ಸದೃಢವಾಗಲು ಕಾರಣವಾಗಿದೆ. ಜಿಲ್ಲೆಯಲ್ಲಿ ಕೃಷಿ ಹಾಗೂ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಬ್ಯಾಂಕ್ ನ ಕೊಡುಗೆ ಮಹತ್ತರವಾಗಿದೆ. ಪುತ್ತೂರಿನಲ್ಲಿ ಅನೇಕ ಉದ್ಯಮಗಳಿರುವುದರಿಂದ ಬ್ಯಾಂಕ್ ಕ್ಷೇತ್ರ ಬೆಳೆಯಲು ಕಾರಣವಾಯಿತು ಎಂದು ಅವರು ತಿಳಿಸಿದರು.
ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಯಿಂದ ಗ್ರಾಹಕರು ಸುಲಭವಾಗಿ ಬ್ಯಾಂಕಿಂಗ್ ವ್ಯವಹಾರ ನಡೆಸಲು ಸಹಕಾರಿಯಾಗಿದೆ. ಈ ಭಾಗದ ಜನರು ಇದರ ಸದುಪಯೋಗ ಪಡೆಯಲಿ. ಬ್ಯಾಂಕ್ ನಿರಂತರವಾಗಿ ಬೆಳೆಯಲಿ, ದ.ಕ.ಜಿಲ್ಲೆಯಲ್ಲಿ ನಂ.1. ಬ್ಯಾಂಕ್ ಆಗಿ ಮೂಡಿಬರಲಿ ಎಂದು ಶುಭಹಾರೈಸಿದರು.
ನೂತನ ಶಾಖೆಯ ಕಚೇರಿಯನ್ನು ಉದ್ಘಾಟಿಸಿದ ಪುತ್ತೂರು ನಗರ ಸಭೆಯ ಪೌರಾಯುಕ್ತ ಮಧು ಮನೋಹರ್ ಮಾತನಾಡಿ, ಜಿಲ್ಲಾ ಕೇಂದ್ರವಾಗಿ ಬೆಳೆಯುವ ಪುತ್ತೂರಿನಲ್ಲಿ ಬ್ಯಾಂಕ್ ಕ್ಷೇತ್ರ ಹಲವಾರು ಕೊಡುಗೆಗಳನ್ನು ನೀಡಿದೆ. ಸರಕಾರದ ಯೋಜನೆಗಳು ಫಲಾನುಭವಿಗಳಿಗೆ ಯೋಜನಾಬದ್ಧವಾಗಿ ಕೈಸೇರಲು ಸರಕಾರಿ ಇಲಾಖಾ ಜೊತೆ ಬ್ಯಾಂಕ್ ಕೈ ಜೊಡಿಸಿದೆ. ಬ್ಯಾಂಕಿಂಗ್ ಕ್ಷೇತ್ರಗಳು ನಗರವನ್ನು ಹೊರತುಪಡಿಸಿ, ಹೊರಗಡೆಯಲ್ಲಿ ಬೆಳೆದಾಗ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಹುಬ್ಬಳ್ಳಿ ವಲಯದ ವಲಯ ವ್ಯವಸ್ಥಾಪಕ ಸುಚೇತ್ ಡಿ.ಸೋಜ ಮಾತನಾಡಿ, ಬ್ಯಾಂಕ್ ಕಳೆದ 90 ವರ್ಷಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದ್ದು, ಯಾವುದೇ ಬ್ಯಾಂಕ್ ಜೊತೆ ಮಿಲನವಾಗದೆ, ಸ್ವಂತ ನಿಧಿ ಮೂಲಕ ವ್ಯವಹಾರ ನಡೆಸುತ್ತಾ ಬಂದಿದೆ. ಹುಬ್ಬಳ್ಳಿ ಝೋನ್ ನ 44ನೇ ಶಾಖೆಯಾಗಿದ್ದು, ಇನ್ನೂ ನಾಲ್ಕು ಶಾಖೆಗಳನ್ನು ತೆರೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ನಗುಮೊಗದ ಸೇವೆ ಗ್ರಾಹಕರಿಗೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇಂತಹ ಸೇವೆ ಬ್ಯಾಂಕಿಂಗ್ ಕ್ಷೇತ್ರವನ್ನು ಬದಲಾವಣೆ ಮಾಡಲು ಸಾಧ್ಯವಾಗಿದೆ. ಸರಕಾರಿ ಎಲ್ಲಾ ಸೇವೆಗಳನ್ನು ಬ್ಯಾಂಕ್ ನೀಡಲಿದ್ದು, ಇದು ಜನಸಾಮಾನ್ಯರ ಬ್ಯಾಂಕ್ ಆಗಿ ಕರ್ತವ್ಯ ಮಾಡಲಿದೆ ಎಂದು ಹೇಳಿದರು.
ಕಟ್ಟಡದ ಮಾಲಕರಾದ ಸುದೀರ್ ಶೆಟ್ಟಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬ್ಯಾಂಕ್ ಮ್ಯಾನೇಜರ್ ಸುದರ್ಶನ ಎ. ವಕೀಲರಾದ ಭಾಸ್ಕರ್ ಕೊಡಿಂಬಾಳ, ನಿವೃತ್ತ ಬ್ಯಾಂಕ್ ಅಧಿಕಾರಿ ನವುಶ್ ಭಟ್, ಮಂಗಳೂರು ಬ್ರಾಂಚ್ ಮ್ಯಾನೇಜರ್ ಮಗೇಶ್ ನಾಯರ್, ಹುಬ್ಬಳ್ಳಿ ಮ್ಯಾನೇಜರ್ ಕಾರ್ತಿಕೇಯನ್, ಸಿಬ್ಬಂದಿಗಳಾದ ಸಾಯಿತೇಜ, ರವಿಚಂದ್ರ ನಾಯ್ಕ ಉಪಸ್ಥಿತರಿದ್ದರು. ಜಾನ್ ಕುಟಿನ್ಜೋ ಕಾರ್ಯಕ್ರಮ ನಿರೂಪಿಸಿದರು.