ಉಪ್ಪಿನಂಗಡಿ, ಅ.19(DaijiworldNews/AA): ಮಗನ ಹುಟ್ಟು ಹಬ್ಬಕ್ಕಾಗಿ ಕಡವೆಯನ್ನು ಗುಂಡಿಕ್ಕಿ ಕೊಂದ ಮಾಂಸವನ್ನು ಮನೆಯ ಫ್ರಿಡ್ಜ್ ನಲ್ಲಿ ಇರಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಗೆ ಬಳಸಲಾದ ಕೋವಿ ಮತ್ತು ಕಡವೆ ಮಾಂಸವನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದೆ.
ಶಿರಾಡಿ ಗ್ರಾಮದ ಗುಂಡ್ಯ ನಿವಾಸಿ ಸುರೇಶ್ ಮತ್ತವರ ಸಹವರ್ತಿಗಳು ರಕ್ಷಿತಾರಣ್ಯದಲ್ಲಿದ್ದ ಕಡವೆಯೊಂದನ್ನು ಗುಂಡಿಕ್ಕಿ ಕೊಂದಿದ್ದರು. ಬಳಿಕ ಅದನ್ನು ಮಗನ ಹುಟ್ಟು ಹಬ್ಬದ ಔತಣ ಕೂಟಕ್ಕೆಂದು ಮಾಂಸ ಮಾಡಿ ಮನೆಯ ಫ್ರಿಡ್ಜ್ ನಲ್ಲಿ ಸಂಗ್ರಹಿಸಿದ್ದರು.
ಈ ಬಗ್ಗೆ ಮಾಹಿತಿ ದೊರೆತ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ನಿರ್ದೇಶನದ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಯತೀಂದ್ರ ಇಲಾಖಾ ಸಿಬಂದಿ ಸುನಿಲ್, ಶಿವಾನಂದ ಅವರ ತಂಡ ಸುರೇಶ್ ಮನೆಗೆ ದಾಳಿ ನಡೆಸಿ ದಾಸ್ತಾನು ಇರಿಸಿದ್ದ ಮಾಂಸ ಹಾಗೂ ಹತ್ಯೆಗೆ ಬಳಸಲಾದ ಕೋವಿಯನ್ನು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಅಧಿಕಾರಿಗಳ ಕಾರ್ಯಾಚರಣೆ ವೇಳೆ ಆರೋಪಿಗಳು ಗುಂಡ್ಯ ಹೊಳೆಯನ್ನು ಈಜಿ ದಾಟುವ ಮೂಲಕ ಪರಾರಿಯಾಗಿದ್ದಾರೆ.