ಬಂಟ್ವಾಳ,ಅ.20(DaijiworldNews/TA):ಸೋಮವಾರ ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆ ಹಿನ್ನೆಲೆಯಲ್ಲಿ ಆದಿತ್ಯವಾರ ಬಂಟ್ವಾಳ ತಾಲೂಕಿನ ಮೊಡಂಕಾಪು ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಮೊಡಂಕಾಪು ಮಸ್ಟರಿಂಗ್ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ತಾಲೂಕು ತಹಶೀಲ್ದಾರ್ ಅರ್ಚನಾ ಭಟ್ ಅವರಲ್ಲಿ ತಯಾರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಗ್ರಾಮಾಂತರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಗಳಾದ ರಾಮಕೃಷ್ಣ, ಹರೀಶ್, ಸುತೇಶ್, ಸಂಜೀವ,ಉಪತಹಶೀಲ್ದಾರ್ ಗಳಾದ ನವೀನ್ ಬೆಂಜನಪದವು, ನರೇಂದ್ರ ಭಟ್, ಕಂದಾಯ ನಿರೀಕ್ಷಕ ಜನಾರ್ಧನ,ವಿಜಯ್, ಪ್ರಶಾಂತ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು.
ಇನ್ನು ಬಂಟ್ವಾಳ ತಾಲೂಕಿನಲ್ಲಿ ಒಟ್ಟು 795 ಮತದಾರರಿದ್ದು,ಅದರಲ್ಲಿ 381 ಪುರುಷ, 414 ಮಹಿಳಾ ಮತದಾರರಿದ್ದಾರೆ. 51 ಗ್ರಾ.ಪಂ.ಗಳಲ್ಲಿ, ಒಂದು ಪುರಸಭೆ, ಒಂದು ಪಟ್ಟಣ ಪಂಚಾಯತ್ ಹೀಗೆ ಒಟ್ಟು 53 ಕೇಂದ್ರಗಳಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭಗೊಂಡು ಸಂಜೆ 4 ರ ತನಕ ಮತದಾನ ನಡೆಯಲಿದೆ.
53 ಕಡೆಗಳಲ್ಲಿ ನಡೆಯುವ ಮತದಾನ ಕೇಂದ್ರಗಳಿಗೆ ಒಟ್ಟು 6 ಸೆಕ್ಟರ್ ಅಧಿಕಾರಿಗಳನ್ನು 53 ಪಿ.ಆರ್.ಒ, 53 ಎಪಿಆರ್ ಒ, 53 ಪಿ.ಒ ಅಧಿಕಾರಿಗಳನ್ನು ಹಾಗೂ 53 ‘ಡಿ’ ಗ್ರೂಪ್ ನೌಕರರು ಸೇರಿದಂತೆ ಒಟ್ಟು 216 ಸಿಬ್ಬಂದಿ ಮತ್ತು 5 ಮೈಕ್ರೋ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಹಶೀಲ್ದಾರ್ ಅರ್ಚನಾ ಭಟ್ ತಿಳಿಸಿದ್ದಾರೆ.