ಉಡುಪಿ, ಅ.21(DaijiworldNews/AA): 'ನಮ್ಮ ರಾಷ್ಟ್ರದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಹುತಾತ್ಮರ ಬಲಿದಾನ ನಿರ್ಣಾಯಕ ಪಾತ್ರ ವಹಿಸಿದೆ' ಎಂದು ಉಡುಪಿ ಜಿಲ್ಲಾ ಸತ್ರ ನ್ಯಾಯಾಧೀಶ ಕೆ. ಗಂಗಣ್ಣನವರ್ ತಿಳಿಸಿದರು.
ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ ನಡೆದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿದ ಅವರು, ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಷ್ಟ್ರವು ಕೇವಲ ಭೌಗೋಳಿಕ ಘಟಕವಾಗಿರದೆ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳು ಸೇರಿದಂತೆ ಎಲ್ಲಾ ರೀತಿಯ ಜೀವವನ್ನು ಒಳಗೊಂಡಿರುವ ವ್ಯವಸ್ಥೆಯಾಗಿದೆ. ದೇಶ ರಕ್ಷಣೆಗಾಗಿ ಪ್ರಾಣ ತೆತ್ತ ಹುತಾತ್ಮ ಯೋಧರ ತ್ಯಾಗವನ್ನು ಸ್ಮರಿಸಿದ ಅವರು, ಅವರ ತ್ಯಾಗದ ಪ್ರತೀಕವಾಗಿ ನಾವು ಶಾಂತಿ ಸುವ್ಯವಸ್ಥೆಯನ್ನು ಎತ್ತಿ ಹಿಡಿಯಬೇಕು. ಪ್ರತಿಯೊಬ್ಬ ಪ್ರಜೆಯೂ ದೇಹ, ಮಾತು ಮತ್ತು ಮನಸ್ಸಿನಿಂದ ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ಮಾತನಾಡಿ, ಹುತಾತ್ಮರ ದಿನಾಚರಣೆ ಆಚರಣೆಯ ಕಾರಣವನ್ನು ಸ್ಮರಿಸಿದರು. ಕಳೆದ ಒಂದು ವರ್ಷದಲ್ಲಿ ಕರ್ನಾಟಕದ ಐವರು ಸೇರಿದಂತೆ ದೇಶದಾದ್ಯಂತ ಒಟ್ಟು 216 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ, ಕರಾವಳಿ ಭದ್ರತಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ.ಸಿದ್ದಲಿಂಗಪ್ಪ, ಪಿ.ಎ.ಹೆಗಡೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.