ಮಂಗಳೂರು, ಅ.21(DaijiworldNews/AA): ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆಯೊಂದು ನುಗ್ಗಿದ ಘಟನೆ ಮಂಗಳೂರು ಹೊರವಲಯದ ಮೂಲ್ಕಿಯಲ್ಲಿ ನಡೆದಿದೆ.
ಮೂಲ್ಕಿಯ ಅಕ್ಕಸಾಲಿಕರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಚಿರತೆ ನುಗ್ಗಿದ್ದು ಮೂಡಬಿದ್ರೆ ವಲಯದ ಅರಣ್ಯ ಅಧಿಕಾರಿಗಳ ಕಾರ್ಯಾಚರಣೆಯಿಂದ ಬೋನ್ ಮೂಲಕ ಚಿರತೆ ಸೆರೆ ಹಿಡಿಯಲಾಗಿದೆ.
ಸದಾನಂದ ಕೋಟ್ಯಾನ್ ರ ಮನೆಯ ಅಡುಗೆ ಕೋಣೆಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ವೇಳೆ ನಾಯಿ ಬೊಗಳಲು ಆರಂಭಿಸಿದ್ದು ಮನೆಮಂದಿ ಚಿರತೆ ನೋಡಿ ಕಂಗಾಲಾಗಿದ್ದಾರೆ. ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅಡುಗೆ ಮನೆಯ ಮುಂಭಾಗ ಬಾಗಿಲಿಗೆ ಬೋನ್ ಅಳವಡಿಸಿ ಸುಮಾರು 5 ಗಂಟೆಗಳ ಬಳಿಕ ಚಿರತೆ ಬೋನಿನೊಳಗೆ ಬಿದ್ದಿದೆ.
ಚಿರತೆಯನ್ನು ನೋಡಲು ಸ್ಥಳದಲ್ಲಿ ಜನಸಮೂಹ ನೆರೆದಿದ್ದರು. ಅರಣ್ಯಾಧಿಕಾರಿಗಳು, ಮೂಲ್ಕಿ ಪೋಲಿಸರು, ಸಾರ್ವಜನಿಕರು ಚಿರತೆ ಹಿಡಿಯಲು ಸಹಕರಿಸಿದ್ದಾರೆ.