ಉಡುಪಿ, ಅ.23(DaijiworldNews/AA): ಉಡುಪಿ ಮಣಿಪಾಲ ಸಂಪರ್ಕಿಸುವ ಇಂದ್ರಾಳಿ ರೈಲ್ವೇ ಸೇತುವೆ 2025ರ ಜನವರಿ 15ರೊಳಗೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಇಂದ್ರಾಳಿ ರೈಲ್ವೇ ಸೇತುವೆ ಕಾಮಗಾರಿ ಅವ್ಯವಸ್ಥೆಯಿಂದ ಈಗಾಗಲೇ ಹಲವು ಬಾರಿ ಅಪಘಾತಗಳು ನಡೆದಿದೆ. ಕಾಮಗಾರಿ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆಯ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಸ್ಥಳಕ್ಕೆ ಭೇಟಿ ನೀಡಿ, ರೈಲ್ವೇ ಸೇತುವೆ ಕಾಮಗಾರಿಯ ಪರಿಶೀಲನೆ ನಡೆಸಿದರು.
ಭೇಟಿ ವೇಳೆ ಮಾತನಾಡಿದ ಅವರು, ಈ ಸೇತುವೆ ಬಗ್ಗೆ ತುಂಬಾ ವಿವಾದಗಳು ನಡೆಯುತ್ತಿವೆ ಅಪಘಾತಗಳು ಆಗಿವೆ. 2018 ರಲ್ಲಿ ಈ ಕಾಮಗಾರಿ ಆರಂಭವಾಗಿದ್ದು, ರೈಲ್ವೆ ಇಲಾಖೆ ವಿಳಂಬ ದಿಂದ ತಡವಾಗುತ್ತಿದೆ. 138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿತ್ತು. ರಸ್ತೆ ಉದ್ದ 38 ಮೀಟರ್ ನಿಂದ 58 ಮೀಟರ್ ಗೆ ವಿಸ್ತರಣೆಯಾಗಿದೆ. ಗರ್ಡರ್ ಗಳಿಗೆ ಅಳವಡಿಸುವ ಸ್ಟೀಲ್ 420 ಟನ್ ಗೆ ಏರಿಕೆಯಾಗಿದೆ. ಕಾಮಗಾರಿ ವಿಳಂಬವಾಗಿರುವುದು ಹೌದು. ಜನವರಿ 15ರೊಳಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು ಎಂದು ತಿಳಿಸಿದರು.
ಮುಂದುವರೆದು ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿ ನಡೆಸಿರುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಕಾಮಗಾರಿಗೆ ಬೇಕಾದ ಎಲ್ಲಾ ಮೆಟೀರಿಯಲ್ಸ್ ಈಗ ಬಂದಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮೇಲೆ ಎಫ್ಐಆರ್ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಘಾತಗಳು ಆಗುತ್ತಿವೆ, ಹಾಗಾಗಿ ಎಫ್ಐಆರ್ ಕೂಡ ಆಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜನವರಿ 15ರೊಳಗೆ ಕಾಮಗಾರಿ ಮುಗಿಸುವುದಾಗಿ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾರೆ. ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ. ನಾನು ಸಂಸದನಾಬಳಿಕ ನಾಲ್ಕೈದು ಬಾರಿ ಸಭೆ ಕರೆದಿದ್ದೇನೆ. ಈ ಸ್ಥಳಕ್ಕೆ ಮೂರು ನಾಲ್ಕು ಬಾರಿ ಭೇಟಿ ಕೊಟ್ಟಿದ್ದೇನೆ ಎಂದರು.
ಶಾಸಕ ಯಶಪಾಲ್ ಸುವರ್ಣ ಮಾತನಾಡಿ, 'ನವೆಂಬರ್ 20 ರೊಳಗೆ ಗರ್ಡರ್ಗಳ ವೆಲ್ಡಿಂಗ್ ಪೂರ್ಣಗೊಳಿಸಲಾಗುವುದು. ನಂತರ ಅವುಗಳನ್ನು ಸ್ಥಳಾಂತರಿಸಲಾಗುತ್ತದೆ ಮತ್ತು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ರೈಲ್ವೆ ಮತ್ತು ಹೆದ್ದಾರಿ ಇಲಾಖೆಗಳೆರಡೂ ತೊಡಗಿಸಿಕೊಂಡಿರುವುದರಿಂದ ವಿವಿಧ ಪ್ರಕ್ರಿಯೆಗಳ ಅಗತ್ಯವಿದೆ. ಯೋಜನೆ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕೆಂದು ನಾನು ಕೋರುತ್ತೇನೆ ಎಂದು ಹೇಳಿದರು.
ಎನ್ಎಚ್ಎಐ ಎಂಜಿನಿಯರ್ ಮಂಜುನಾಥ್ ನಾಯಕ್, ಸಿಎಂಸಿ ಸದಸ್ಯ ಗಿರೀಶ್ ಅಂಚನ್ ಮತ್ತು ಇತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.