ಕೇರಳ ನ 30 : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಉಂಟಾದ ಒಕ್ಹಿ ಚಂಡಮಾರುತದಿಂದ ದಕ್ಷಿಣ ಕರಾವಳಿಯಲ್ಲಿ ಭಾರೀ ಪ್ರಮಾಣದ ಮಳೆ ಸುರಿಯುತ್ತಿದ್ದು , ಕೇರಳ ರಾಜ್ಯದಲ್ಲೂ ಚಂಡಮಾರುತದಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ದಕ್ಷಿಣ ಕೇರಳದತ್ತ ಧಾವಿಸುತ್ತಿರುವ ಒಖಿ ಚಂಡಮಾರುತ ಕನ್ಯಾಕುಮಾರಿ ಹಾಗೂ ತಿರುವನಂತಪುರಂದತ್ತ ಮುಖಮಾಡಿದೆ. ಕೇರಳದಲ್ಲಿ ಗಂಟೆಗೆ ೭೫ ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಮಧ್ಯಾಹ್ನನದಿಂದಲೇ ತಿರುವನಂತಪುರಂ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಹಠಾತ್ ರಜೆ ಘೋಷಿಸಿದೆ, ಅಲ್ಲದೆ ಮುಂದಿನ ಪ್ರಕಟಣೆ ನೀಡುವವರೆಗೆ ಶಾಲೆಗಳನ್ನು ತೆರೆಯುವಂತಿಲ್ಲ ಎಂದ ಸರ್ಕಾರ ಆದೇಶ ನೀಡಿದೆ.
ದಕ್ಷಿಣ ಕೇರಳದ ಐದು ಜಿಲ್ಲೆಗಳಲ್ಲಿ ಮುಂದಿನ ತಾಸುಗಳಲ್ಲಿ ಭಾರೀ ಗಾಳಿ ಮಳೆ ಸಾಧ್ಯತೆ ಇರೋದ್ರಿಂದ ರಾತ್ರಿ ಪ್ರಯಾಣ ಮಾಡುವವರಿಗೆ, ಮೀನುಗಾರರಿಗೆ ಹಾಗೂ ಕಡಲ ಕಿನಾರೆಯಲ್ಲಿ ವಾಸಿಸುವವರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆಯನ್ನೂ ರವಾನಿಸಿದೆ. ನೈಯಾರ್ ಅಣೆಕಟ್ಟನ್ನು ತೆರೆಯಲಾಗಿದ್ದು, ತುರ್ತು ಪರಿಸ್ಥಿತಿ ನಿಭಾಯಿಸಲು ಕೇರಳ ಸರಕಾರ ಸಜ್ಜುಗೊಂಡಿದೆ. ಈ ನಡುವೆ ಚಂಡಮಾರುತದ ಆರ್ಭಟಕ್ಕೆ ಬೃಹತ್ ಮರಗಳು ಧರೆಗುರುಳುತ್ತಿದ್ದು, ಮರವೊಂದು ರಿಕ್ಷಾದ ಮೇಲೆ ಬಿದ್ದು ಚಾಲಕ ಮೃತಪಟ್ಟ ವರದಿಯಾಗಿದೆ. ಇನ್ನು ಕನ್ಯಾಕುಮಾರಿಯಲ್ಲೂ ಒಕ್ಹಿ ಚಂಡಮಾರುತ ಮೂವರು ಬಲಿಪಡೆದುಕೊಂಡಿದೆ. ಇಡುಕ್ಕಿ ಜಿಲ್ಲೆಯಲ್ಲಿ ಮರಗಳು ರಸ್ತೆ ಮೇಲೆ ಉರುಳಿ ಬಿದ್ದು ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ಥವ್ಯಸ್ಥವಾಗಿದೆ. ನಾಗರ- ಕೋವಿಲ್ ಕೊಚ್ಚುವೇಳಿ, ಕೊಚ್ಚುವೇಳಿ- ನಾಗರ ಕೋವಿಲ್, ಕೊಲ್ಲಂ- ಕನ್ಯಾಕುಮಾರಿ, ತಿರುವನಂತಪುರಂ- ಕನ್ಯಾಕುಮಾರಿ ರೈಲುಗಳು ರದ್ದುಗೊಂಡಿದ್ದು ಶಬರಿಮಲೆಗೆ ತೆರಳುವ ಭಕ್ತರು ಎಚ್ಚರಿಕೆಯಿಂದ ಇರುವಂತೆ ಹಾಗೂ ಕಾಡು ದಾರಿಯನ್ನು ಬಳಸದಂತೆ ಸರ್ಕಾರ ಮನವಿ ಮಾಡಿಕೊಂಡಿದೆ.