ಉಳ್ಳಾಲ, ಜೂ 03 (Daijiworld News/MSP): ಗೋವಾ – ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತೊಕ್ಕೊಟ್ಟು ಫ್ಲೈಓವರ್ (ಮೇಲ್ಸೇತುವೆ)ಸಿದ್ಧವಾಗುತ್ತಿದ್ದು, ಸ್ಥಳೀಯರು ಬಳಸುವ ಫ್ಲೈಓವರ್ ಕೆಳಗಡೆಯ ರಸ್ತೆಗಳ ಸಮಸ್ಯೆಯನ್ನು ಕೂಡಲೇ ಬಗೆಹರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಜೂ.3 ರ ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ಉಸ್ತುವಾರಿ ಸಚಿವ ಖಾದರ್ , ರಾಷ್ಚ್ರೀಯ ಹೆದ್ದಾರಿ ಅಭಿವೃದ್ಧಿ ಮಾಡುವ ಸ್ಥಳೀಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು
ಹೇಳಿದರು.
ದೇರಳಕಟ್ಟೆ ಮತ್ತು ಮಂಗಳೂರು ಕಡೆಯಿಂದ ಬರುವ ವಾಹನಗಳು ಉಳ್ಳಾಲ ಮತ್ತು ಸೋಮೇಶ್ವರ ಕಡೆಗೆ ಹೋಗುವುದು ಕ್ಲಿಷ್ಟಕರ ಆಗಲಿದೆ. ಫ್ಲೈಓವರ್ ಮೂಲಕ ಬರುವ ವಾಹನಗಳು ಮತ್ತು ಕಾಸರಗೋಡು ಕಡೆಯಿಂದ ಬರುವ ವಾಹನಗಳು ದಟ್ಟಣೆಯನ್ನು ದಾಟಿ ಉಳ್ಳಾಲ ಕಡೆಗೆ ವಾಹನ ಸಂಚಾರದಲ್ಲಿ ಸಮಸ್ಯೆ ಆಗಲಿದೆ. ಈ ಸ್ಥಳದಲ್ಲಿ ಅಪಘಾತಗಳು ನಡೆಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಸಚಿವ ಖಾದರ್ ಹೇಳಿದರು.
ಈ ಜಂಕ್ಷನಿನಲ್ಲಿ ಅಪಘಾತವನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಪ್ರತ್ಯೇಕ ಸೂತ್ರಗಳನ್ನು ಸಿದ್ಧಪಡಿಸಲಿದ್ದು, ಅನಂತರ ಸಂಸದರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಅತ್ಯಂತ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಲಾಗುವುದು ಎಂದು ಖಾದರ್ ಈ ಸಂದರ್ಭದಲ್ಲಿ ತಿಳಿಸಿದರು.
ಹೆದ್ದಾರಿ ಕಾಮಗಾರಿ ಆರಂಭವಾದಾಗಲೇ ಈ ನಿಟ್ಟಿನಲ್ಲಿ ಪರಿಹಾರ ಸೂತ್ರಗಳನ್ನು ಕಂಡುಕೊಳ್ಳಬೇಕೆಂದು ತಾನು ಸೂಚಿಸಿದ್ದೆ. ತೊಕ್ಕೊಟ್ಟು ಫ್ಲೈಓವರ್ ವಿಳಂಬ ಆಗಲು ತಾನು ಕಾರಣ ಎಂದು ರಾಜಕೀಯ ದುರುದ್ದೇಶದಿಂದ ಆಪಾದನೆಗಳನ್ನು ಮಾಡಲಾಯಿತು. ವಾಸ್ತವಾಂಶವನ್ನು ಯಾರೂ ಅರಿತುಕೊಳ್ಳಲಾಗಿದೆ. ಫ್ಲೈಓವರ್ ಯೋಜನೆ ಅವೈಜ್ಞಾನಿಕವಾಗಿದೆ ಎಂದು ಖಾದರ್ ಹೇಳಿದರು.