ಮಂಗಳೂರು, ಜೂ03(Daijiworld News/SS): ಉದ್ಯೋಗಕ್ಕಾಗಿ ಕುವೈಟ್ಗೆ ತೆರಳಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳೂರಿನ 35 ಯುವಕರ ಸಹಿತ ಸುಮಾರು 100 ಮಂದಿಗೆ ತಾಯ್ನಾಡಿಗೆ ಮರಳುವ ಹಾದಿ ಸುಗಮವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನ 35 ಯುವಕರ ಸಹಿತ 100 ಮಂದಿ ಭಾರತೀಯರಿಗೆ ತಾಯ್ನಾಡಿಗೆ ಮರಳುವ ಹಾದಿ ಬಹುತೇಕ ಯಶಸ್ವಿಯಾಗಿದ್ದು, 53 ಮಂದಿಯ ಬಿಡುಗಡೆಗೆ ಸಮ್ಮತಿ ಸಿಕ್ಕಿದೆ. ಈ ವಿಚಾರವಾಗಿ ಈಗಾಗಲೇ ಅನೇಕ ಸುತ್ತಿನ ಸಭೆ ನಡೆದಿದ್ದು, ಜೂ03 ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ಕುರಿತು ಮಾತುಕತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಜೂ02ರಂದು ನಡೆದ ಸಭೆಯಲ್ಲಿ, ಕುವೈಟ್'ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಉಪ ಕಾರ್ಯದರ್ಶಿ ಶಿಬಿ ಯು.ಎಸ್, ಶೋನ್, ಪಬ್ಲಿಕ್ ಅಥಾರಿಟಿ ಆಫ್ ಮ್ಯಾನ್ಪವರ್ (ಪ್ಯಾಮ್), ಇನೆಸ್ಕೋ ಜನರಲ್ ಟ್ರೇಡಿಂಗ್ ಆ್ಯಂಡ್ ಕಾಂಟ್ರಾಕ್ಟ್ ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು.
ಅರೇಬಿಕ್ ಭಾಷೆಯಲ್ಲಿದ್ದ ಇತ್ಯರ್ಥ ಪತ್ರಕ್ಕೆ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಹಾಗೂ ಅವರ ನಿರ್ದೇಶನದಂತೆ ಸಂತ್ರಸ್ತರು ಸಹಿ ಹಾಕಿದ್ದಾರೆ. ಜೂ03ರಂದು ಮತ್ತೆ ಸಭೆ ಮುಂದುವರಿಯಲಿದ್ದು, ಉಳಿದ 22 ಮಂದಿ ಸಂತ್ರಸ್ತರ ವಿಷಯ ಸಂಬಂಧಿಸಿ ನಿರ್ಣಯ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಅನಿವಾಸಿ ಕನ್ನಡಿಗರ ಸಂಘಟನೆ ಮೂಲ ತಿಳಿಸಿದೆ.
ಪೂರ್ವ ನಿಗದಿಯಂತೆ ಜೂ.02ರಂದು ನಡೆದ ಸಭೆಯಲ್ಲಿ ಎಲ್ಲ 75 ಭಾರತೀಯ ಸಂತ್ರಸ್ತರು ಭಾಗವಹಿಸಬೇಕಾಗಿತ್ತು. ಆದರೆ ಇದರಲ್ಲಿ 15 ಮಂದಿ ಕಂಪನಿ ಸೊತ್ತುಗಳನ್ನು ಪೂರ್ಣ ಪ್ರಮಾಣದಲ್ಲಿ ಹಸ್ತಾಂತರಿಸಿಲ್ಲ ಎನ್ನುವ ಕಾರಣ ನೀಡಿ ಅವರು ಸಭೆಯಲ್ಲಿ ಭಾಗವಹಿಸಲು ಉದ್ಯೋಗ ನೀಡಿದ್ದ ಸಂಸ್ಥೆ ಅವಕಾಶ ನೀಡಿಲ್ಲ. ಆ ನೌಕರರು ಕಂಪನಿಯ ಮೊಬೈಲ್, ಬೈಕ್ ಮುಂತಾದ ವಸ್ತುಗಳಲ್ಲಿ ಕೆಲವನ್ನು ಹಸ್ತಾಂತರಿಸಿಲ್ಲ ಎಂದು ಕಂಪೆನಿ ತಗಾದೆ ತೆಗೆದಿದೆ ಎಂದು ಆಕ್ಷೇಪಿಸಲಾಗಿದೆ. ಶುಕ್ರವಾರ ಹಾಗೂ ಶನಿವಾರ ಕಂಪೆನಿಗೆ ರಜೆ ಇದ್ದ ಕಾರಣ ಕೆಲವರಿಗೆ ತಮ್ಮ ವಶದಲ್ಲಿದ್ದ ವಸ್ತುಗಳನ್ನು ಹಸ್ತಾಂತರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಕುವೈಟ್'ನಲ್ಲಿರುವ ಸಂತ್ರಸ್ತರು ಕಾನೂನು ಹೋರಾಟ ನಡೆಸುವುದಿದ್ದರೆ ಪೂರ್ಣ ಸಹಕಾರ ನೀಡಲಾಗುವುದು ಎಂದು ಶೋನ್ನ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ ಇದು ಪ್ರಾಯೋಗಿಕವಾಗಿ ಕಠಿಣ. ಕಾನೂನು ಹೋರಾಟ ಮುಂದುವರಿಸಿದರೆ ಮತ್ತೆ ಕೆಲವು ತಿಂಗಳು ಕುವೈತ್ನಲ್ಲಿಯೇ ಉಳಿಯಬೇಕು. ಇರುವ ದಾಖಲೆಗಳು ನಮಗೆ ಪೂರಕವಾಗಿ ಇರಬೇಕು. ಆದ್ದರಿಂದ ಸಿಗುವಷ್ಟು ಸೌಲಭ್ಯ ಪಡೆದುಕೊಂಡು ಸ್ವದೇಶಕ್ಕೆ ಮರಳುವುದು. ಸಾಧ್ಯವಾದರೆ ಸ್ವದೇಶಕ್ಕೆ ಮರಳಿದ ಬಳಿಕ ಕಾನೂನು ಹೋರಾಟ ನಡೆಸಬಹುದು. ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕೋರಿಕೆಗಳು ಬಂದರೆ ಅಗತ್ಯ ದಾಖಲೆ, ಮಾಹಿತಿ ಒದಗಿಸಲಾಗುವುದು ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳು ಸಂತ್ರಸ್ತರಿಗೆ ಭರವಸೆ ನೀಡಿದ್ದಾರೆ ಎಂದು ಮೂಲ ತಿಳಿಸಿದೆ.