ಮಂಗಳೂರು, ಜೂ 03(Daijiworld News/SM): ವಿದ್ಯಾರ್ಥಿಗಳಿಗೆ ರಜೆ ಮುಗಿದು ಇದೀಗ ಮತ್ತೆ ತರಗತಿಗಳು ಆರಂಭಗೊಂಡಿವೆ. ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇನ್ನೊಂದೆಡೆ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕರೆ ತರುವ ವಾಹನಗಳ ಅಬ್ಬರದ ಓಡಾಟವೂ ಜೋರಾಗಿದೆ. ಶಾಲಾ ಬಸ್ ನಿಂದ ಹಿಡಿದು ರಿಕ್ಷಾದ ತನಕ ವಿದ್ಯಾರ್ಥಿಗಳನ್ನು ಹೊತ್ತೊಯ್ಯುವ ಬಸ್ ಗಳ ಓಡಾಟ ಹೆಚ್ಚಾಗಿರುತ್ತದೆ. ಹೀಗಿರುವಾಗ ಕಾನೂನು, ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.
ಸಾಂದರ್ಭಿಕ ಚಿತ್ರ
ಇನ್ನು ನಗರದ ಬಹುತೇಕ ಪ್ರಮುಖ ಶಿಕ್ಷಣ ಸಂಸ್ಥೆಗಳು ಶಾಲಾ ವಾಹನಗಳನ್ನು ಹೊಂದಿವೆ. ಆದರೂ ಎಲ್ಲ ಮಕ್ಕಳು ಈ ವಾಹನಗಳಲ್ಲಿ ಸಂಚರಿಸುತ್ತಿಲ್ಲ. ಖಾಸಗಿ ಬಾಡಿಗೆ ಟ್ಯಾಕ್ಸಿ ಅಥವಾ ಆಟೋ ರಿಕ್ಷಾಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ತಮ್ಮ ಸ್ವಂತ ವಾಹನಗಳನ್ನು ಹೊಂದಿರುವವರಿಗೆ ಪ್ರತಿಷ್ಟೆಯ ಪ್ರಶ್ನೆಯಾದರೆ, ಮತ್ತೆ ಕೆಲವರಿಗೆ ಹಣಕಾಸಿನ ಸಮಸ್ಯೆ. ಇಲ್ಲಿ ಕೆಲವೊಂದು ಶಾಲೆಗಳಲ್ಲಿ ವಾಹನಗಳಿಲ್ಲದ ಕಾರಣ ಖಾಸಗಿ ಬಾಡಿಗೆ ವಾಹನಗಳಲ್ಲಿ ಕೂಡ ವಿದ್ಯಾರ್ಥಿಗಳನ್ನು ಸಾಗಾಟ ಮಾಡಲಾಗುತ್ತದೆ. ಇವುಗಳಲ್ಲಿ ರಿಕ್ಷಾಗಳು ಅಧಿಕವಾಗಿ ಕಂಡು ಬರುತ್ತದೆ. ರಿಕ್ಷಾದಲ್ಲಿ ವಿದ್ಯಾರ್ಥಿಗಳು ಸಂಚರಿಸುವ ಸಂದರ್ಭದಲ್ಲಿ ಮಿತಿ ಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿಸುವುದು ಕಂಡು ಬರುತ್ತಿದೆ.
ಈ ಶೈಕ್ಷಣಿಕ ವರ್ಷ ಆರಂಭದಲ್ಲೇ ಮಂಗಳೂರು ನಗರ ಪೊಲೀಸ್ ಆಯುಕ್ತರು ಶಿಕ್ಷಣ ಸಂಸ್ಥೆಗಳ ಆಡಳಿತ ಮುಖ್ಯಸ್ಥರು, ವಾಹನ ಮಾಲಕರು ಹಾಗೂ ಚಾಲಕರೊಂದಿಗೆ ಸಭೆ ನಡೆಸಿ ಸಮಗ್ರ ಮಾಹಿತಿ ನೀಡಿದ್ದು, ಜಾಗೃತಿ ಮೂಡಿಸಿದ್ದಾರೆ. ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ಮಾರ್ಗ ಸೂಚಿಗಳನ್ನು ಸಂಬಂಧ ಪಟ್ಟ ಎಲ್ಲರಿಗೂ ತಿಳಿಸಿದ್ದಾರೆ. ಶಾಲಾ ವಾಹನಗಳು ಸಂಚರಿಸುವ ವೇಳೆ ಕಾನೂನನ್ನು ಪರಿಪಾಲಿಸಿ, ಅದರ ಚೌಕಟ್ಟಿನಲ್ಲೇ ವಾಹನಗಳು ಸಂಚರಿಸುವುದು ಇದರ ಪ್ರಮುಖ ಆಶಯವಾಗಿದೆ.
ಖಾಸಗಿ ವಾಹನಗಳಿಂದ ಸಂಚಾರ ದಟ್ಟನೆ:
ಇನ್ನು ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳು ಶಾಲಾ ಬಸ್ ಗಳನ್ನು ಬಳಸಿಕೊಂಡು ಶಾಲೆಗೆ ತೆರಳಿದರೆ, ಮತ್ತೆ ಕೆಲವು ವಿದ್ಯಾರ್ಥಿಗಳು ತಮ್ಮ ಪೋಷಕರ ಖಾಸಗಿ ವಾಹನಗಳಲ್ಲೇ ಶಾಲೆಗಳಿಗೆ ತೆರಳುತ್ತಾರೆ. ದ್ವಿಚಕ್ರ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಕರೆತರುವುದಾದರೆ ಅಷ್ಟೊಂದು ಸಂಚಾರಕ್ಕೆ ತೊಂದರೆಯಾಗುವುದಿಲ್ಲ. ಆದರೆ ಕಾರು, ಜೀಪ್ ಗಳಲ್ಲಿ ವಿದ್ಯಾರ್ಥಿಗಳನ್ನು ಕರೆ ತರುವಂತಹ ಸಂದರ್ಭ ಸಹಜವಾಗಿಯೇ ಸಂಚಾರದಲ್ಲಿ ತೊಂದರೆಯುಂಟಾಗುತ್ತದೆ.
ಖಾಸಗಿ ವಾಹನಗಳಿಗೆ ಶಾಲಾ ಆವರಣದೊಳಗಡೆ ಪ್ರವೇಶ ನಿರಾಕರಣೆಯಿಂದಾಗಿ ಬಹುತೇಕ ಕಡೆಗಳಲ್ಲಿ ವಾಹನದ ಮಾಲಕರು ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಸಾರ್ವಜನಿಕ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ತಾಸುಗಟ್ಟಲೆ ಟ್ರಾಫಿಕ್ ಜಾಂ ಉಂಟಾಗುವ ನಿದರ್ಶನಗಳು ನಗರದಲ್ಲಿ ಗಮನಿಸಬಹುದಾಗಿದೆ. ಕೇವಲ ಓರ್ವ ವಿದ್ಯಾರ್ಥಿಯನ್ನು ಕರೆ ತರಲು ಹತ್ತಾರು ಜನ ಪ್ರಯಾಣಿಸುವ ಕಾರುಗಳನ್ನು ಪೋಷಕರು ಬಳಸುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಕೂಡ ಅಸಹಾಯಕರಾಗುತ್ತಿದ್ದಾರೆ.
ಈ ಬಗ್ಗೆ ಶಾಲಾ ಆಡಳಿತ ಮಂಡಳಿ ಅಥವಾ ಇಲಾಖೆ ಸೂಕ್ತ ಕಾನೂನನ್ನು ಜಾರಿಗೆ ತರುವ ಅಗತ್ಯವಿದೆ. ಓರ್ವ ವಿದ್ಯಾರ್ಥಿಯನ್ನು ಕರೆ ತರಲು ಗಜ ಗಾತ್ರದ ಕಾರುಗಳ ಬಳಕೆಗೆ ಶಾಲಾ ಆಡಳಿತ ಮಂಡಳಿ ಅಥವಾ ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಇಂತಹ ಪೋಷಕರಿಗೆ ಇಲಾಖೆ ಹಾಗೂ ಸಂಸ್ಥೆ ಮನವರಿಕೆ ಮಾಡುವ ಅಗತ್ಯವಿದೆ. ಹಾಗೂ ಇವುಗಳ ಬದಲಿಗೆ ಶಾಲಾ ವಾಹನಗಳನ್ನೇ ಎಲ್ಲಾ ವಿದ್ಯಾರ್ಥಿಗಳು ಬಳಸುವಂತಹ ಕಾನೂನನ್ನು ಜಾರಿಗೆ ತರಬೇಕಾದ ಅನಿವಾರ್ಯತೆ ಇದೆ. ಆ ಮೂಲಕ ಸಮಾನತೆಯ ಸಂದೇಶ ಕೂಡ ಸಾರಿದಂತಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಸೂಕ್ತ ಕ್ರಮಕೈಗೊಳ್ಳುವ ಅಗತ್ಯತೆ ಇದೆ.