ಉಡುಪಿ, ನ 30 : ಜಿಲ್ಲೆಯಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಇಳಿಮುಖವಾಗಿದ್ದು, ಜನರಲ್ಲಿ ಏಡ್ಸ್ ನಿಯಂತ್ರಣದ ಕುರಿತು ‘ನನ್ನ ಹಕ್ಕು,ನನ್ನ ಆರೋಗ್ಯ’ ಎಂಬ ಮಾಹಿತಿ ತಲುಪಿಸುವಲ್ಲಿ ಇಲಾಖೆಯು ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರೋಹಿಣಿ ಹೇಳಿದರು.
ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 2014ರ ಸಮೀಕ್ಷೆ ಪ್ರಕಾರ ಶೇ.0.07 ಏಡ್ಸ್ ರೋಗಿಗಳಿದ್ದು, 2017ರ ವೇಳೆಗೆ ಶೇ.0.05ಗೆ ಕಡಿಮೆ ಆಗಿದೆ. ಪ್ರತೀ ಮೂರು ವರ್ಷಕ್ಕೊಮ್ಮೆ ಮಾಡಲಾಗುವ ಸಮೀಕ್ಷೆಯ ಪ್ರಕಾರ 33,998 ಜನರ ತಪಾಸಣೆಯ ಉದ್ದೇಶ ಹೊಂದಿದ್ದು, ಶೇ.82ರಷ್ಟು ಜನರನ್ನು ಈಗಾಗಲೇ ತಪಾಸಣೆಗೆ ಒಳಪಡಿಸಲಾಗಿದೆ. ತಪಾಸಣೆಗೆ ಒಳಪಡಿಸಿದ ಬಳಿಕ 160 ಮಂದಿ ಏಡ್ಸ್ ಸೋಂಕು ಪೀಡಿತರೆಂದು ತಿಳಿದು ಬಂದಿದೆ ಎಂದರು
ಏಡ್ಸ್ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ 13 ಐಸಿಟಿಸಿ ಕೇಂದ್ರಗಳಿದ್ದು, ಹೆಚ್.ಐ.ವಿ ಸೋಕಿಂತ ಗರ್ಭಿಣಿಯರಿಂದ ಶಿಶುವಿಗೆ ಸೋಂಕು ಹರಡದಂತೆ ಹೆರಿಗೆಗೆ ಮುಂಚೆ ಎ.ಆರ್.ಟಿ ಹಾಗೂ ಹೆರಿಗೆ ನಂತರ ಹುಟ್ಟಿದ ಮಗುವಿಗೆ ನೆವಿರಾಪಿನ್ ದ್ರಾವಣ ನೀಡಲಾಗುವುದು., ಅರ್ಹ ಸೋಂಕಿತರಿಗೆ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಮತ್ತು ಸಾಮಾನ್ಯ ಜೀವನ ನಡೆಸಲು ಎ.ಆರ್.ಟಿ ಚಿಕಿತ್ಸೆಯನ್ನು ಉಡುಪಿ ಮತ್ತು ಕುಂದಾಪುರದಲ್ಲಿ ಉಚಿತವಾಗಿ ನೀಡಲಾಗುತ್ತಿದ್ದು, ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಲೈಂಗಿಕ ರೋಗ ಪತ್ತೆ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಜಿಲ್ಲೆಯ ಜನರಿಗೆ ರೋಗದ ಬಗ್ಗೆ ಅರಿವಿದ್ದು, ನಿಯಂತ್ರಣಕ್ಕೆ ನೆರವಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುವಲ್ಲಿ ಜಿಲ್ಲೆಯ ಐಸಿಟಿಸಿ ಕೇಂದ್ರಗಳಲ್ಲಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕಕ್ಕೆ ಭೇಟಿ ನೀಡಿ ಪಡೆಯಬಹುದಾಗಿದ್ದು, 1097 ಕ್ಕೆ ಕರೆಮಾಡಿ ಉಚಿತವಾಗಿಯೂ ಪ್ರತಿಯೊಬ್ಬರೂ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ ಚಿದಾನಂದ ಸಂಜು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು ಉಪಸ್ಥಿತರಿದ್ದರು.