ಬೆಂಗಳೂರು, ಜೂ03(Daijiworld News/SS): ಕಳೆದ ಕೆಲ ದಿನಗಳ ಹಿಂದೆ ಉಡುಪಿ ಅಷ್ಟಮಠದ ಹಿರಿಯ ಯತಿ ಪೇಜಾವರ ಶ್ರೀ, ಗಾಂಧೀಜಿ ರಾಷ್ಟ್ರಪಿತರಲ್ಲ, ಅವರು ರಾಷ್ಟ್ರಪುತ್ರ ಎಂದು ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ಸಾಹಿತಿಯೊಬ್ಬರು ತಿರುಗೇಟು ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡುತ್ತಾ ಪೇಜಾವರ ಶ್ರೀಗಳು, ನನಗೆ ಗಾಂಧೀಜಿ ಬಗ್ಗೆ ತುಂಬಾ ಗೌರವವಿದೆ. ಆದರೆ, ಈ ದೇಶ ಗಾಂಧೀಜಿಯವರಿಂದ ಆರಂಭವಾದುದಲ್ಲ. ವೇದವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ ಜಾಗೃತವಾಗಿರುವುದು. ಹಾಗಾಗಿ, ವೇದವ್ಯಾಸರು ಈ ದೇಶದ ರಾಷ್ಟ್ರಪಿತ, ಗಾಂಧೀಜಿ ರಾಷ್ಟ್ರಪುತ್ರ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಾಹಿತಿ ಬಂಜಗೆರೆ ಜಯಪ್ರಕಾಶ್, ಸ್ವತಂತ್ರ ಭಾರತದ ರಾಷ್ಟ್ರಪಿತ ಗಾಂಧೀಜಿಯೇ ಹೊರತು ವೇದವ್ಯಾಸರು ಅಲ್ಲ. ಸ್ವತಂತ್ರ ಬರುವ ಮೊದಲು ನಮ್ಮ ದೇಶ ಸಾರ್ವಭೌಮತ್ವವನ್ನು ಹೊಂದಿರಲಿಲ್ಲ. ಪೇಜಾವರ ಶ್ರೀಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಐದು ಸಾವಿರ ವರ್ಷಗಳ ಇತಿಹಾಸವನ್ನು ನಮ್ಮ ದೇಶ ಹೊಂದಿದೆ. ವೇದವ್ಯಾಸರು ಮಹಾಭಾರತ ಬರೆದವರು. ಅವರನ್ನು ಈ ದೇಶದ ಮಹಾನ್ 'ಕಾವ್ಯ ಪಿತಾಮಹ' ಎಂದು ಕರೆಯಿರಿ. ಆದರೆ, ಅವರನ್ನು ರಾಷ್ಟ್ರಪಿತ ಎಂದು ಕರೆಯುವುದು ಸಮಂಜಸವಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.