ಮಂಗಳೂರು, ನ.02(DaijiworldNews/AA): ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಉದ್ಯಮಿ ಮುಮ್ತಾಜ್ ಅಲಿ ಅವರನ್ನು ಬ್ಲ್ಯಾಕ್ಮೇಲ್ ಹಾಗೂ ಸುಲಿಗೆ ಮಾಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ದಂಪತಿ ಸಹಿತ ಎಲ್ಲ ಆರು ಆರೋಪಿಗಳ ನ್ಯಾಯಾಂಗ ಬಂಧನ ಮುಂದುವರೆದಿದೆ.
ಆರೋಪಿಗಳಾದ ರೆಹಮತ್ ಮತ್ತು ಆಕೆಯ ಪತಿ ಶೋಯಬ್, ಇತರ ಆರೋಪಿಗಳಾದ ಮೊಹಮ್ಮದ್ ಸಿರಾಜ್ ಸಲಾಂ, ಅಬ್ದುಲ್ ಸತ್ತಾರ್, ಕಲಂದರ್ ಶಾ ಹಾಗೂ ಮೊಹಮ್ಮದ್ ಮುಸ್ತಫಾ ಅವರ ನ್ಯಾಯಾಂಗ ಬಂಧನ ಮುಂದುವರೆದಿದೆ.
ಆರೋಪಿಗಳು ಮಮ್ತಾಜ್ ಅಲಿ ಜೊತೆಗೆ ರೆಹಮತ್ಗೆ ಅಕ್ರಮ ಸಂಬಂಧ ಇದೆ ಎಂದು ಪ್ರಚಾರ ಮಾಡಿ ಹೆಸರು ಹಾಳು ಮಾಡುವುದಾಗಿ ಹೆದರಿಸಿ ಬ್ಲ್ಯಾಕ್ ಮೇಲ್ ಮಾಡಿ 75 ಲ.ರೂ ಪಡೆದುಕೊಂಡಿದ್ದರು. ಅಲ್ಲದೆ ಇನ್ನೂ 50 ಲ.ರೂ. ಕೊಡಬೇಕೆಂದು ನಿರಂತರ ಬೆದರಿಕೆ ಹಾಕಿದ್ದರು. ಮಮ್ತಾಜ್ ಅವರ ಅಣ್ಣನ ಮನೆಯವರಿಗೂ ಬೆದರಿಕೆ ಹಾಕಿದ್ದರು. ಈ ಮೂಲಕ ಮಮ್ತಾಜ್ ಅಲಿ ಅವರ ಸಾವಿಗೆ ಈ ಆರು ಮಂದಿ ಆರೋಪಿಗಳು ಕಾರಣರಾಗಿದ್ದಾರೆ. ಈ ಬಗ್ಗೆ ಮಮ್ತಾಜ್ ಅಲಿ ಅವರು ತನ್ನ ಅಣ್ಣನಿಗೆ ಸಂದೇಶ ಕಳುಹಿಸಿದ್ದಾರೆ ಎಂದು ಕಾವೂರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.