ಉಡುಪಿ,02(DaijiworldNews/TA):ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ದೀಪಾವಳಿ ಹಬ್ಬದ ಪ್ರಯುಕ್ತ ಗೋವಿನ ಪೂಜೆ, ವಾಹನ ಪೂಜೆಯಂತಹ ಸಾಂಪ್ರದಾಯಿಕ ಆಚರಣೆಗಳನ್ನು ಸಂಭ್ರಮದಿಂದ ಆಚರಿಸಲಾಯಿತು.ಇದೇ ವೇಳೆ ಇಲ್ಲಿ ಪರಿಸರ ಸ್ನೇಹಿ ಆಟೋ ಒಂದು ಎಲ್ಲರ ಗಮನಸೆಳೆಯಿತು.
ಉಡುಪಿ ಜಿಲ್ಲೆಯ ಕಟಪಾಡಿಯ ಬಹುಕಾಲದ ನಿವಾಸಿ ಮತ್ತು ಸಂಗಮ್ ಫ್ರೆಂಡ್ಸ್ನ ಸಮರ್ಪಿತ ಸದಸ್ಯ ಜಯಕರ್ ಕುಂದರ್ ಅವರು ವಾಹನ ಅಲಂಕಾರದಿಂದ ಸ್ಥಳೀಯ ಐಕಾನ್ ಆಗಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತ ಕಲಾವಿದ, ಕುಂದರ್ ದೀಪಾವಳಿ ಆಚರಣೆಗಾಗಿ ಪ್ರತಿ ವರ್ಷ ತಮ್ಮ ಆಟೋ-ರಿಕ್ಷಾವನ್ನು ಸೃಜನಾತ್ಮಕವಾಗಿ ಅಲಂಕರಿಸುತ್ತಿದ್ದರು, ಈ ಬಾರಿಯೂ ವಿಭಿನ್ನ ಅಲಂಕಾರಿಕ ಆಟೋದಿಂದ ಅವರು ಉಡುಪಿಯ ಬೀದಿಗಳಲ್ಲಿ ಓಡಾಟ ನಡೆಸುವಾಗ ನಿವಾಸಿಗಳನ್ನು ಸಂತೋಷಪಡಿಸಿದ್ದಾರೆ.
ಈ ವರ್ಷ, ಕುಂದರ್ ಅವರ ಆಟೋ-ರಿಕ್ಷಾ ಅಲಂಕೃತ ಆನೆಯ ನೋಟವನ್ನು ಪಡೆದುಕೊಂಡಿತು, ಇದು ಅನೇಕ ವರ್ಷಗಳಿಂದ ಮೈಸೂರು ದಸರಾ ಉತ್ಸವಗಳನ್ನು ಮುನ್ನಡೆಸುತ್ತಿದ್ದ ಪ್ರಸಿದ್ಧ "ಅಂಬಾರಿ" ಆನೆ ಅರ್ಜುನನನ್ನು ನೆನಪಿಸುತ್ತದೆ. ಕುಂದರ್ ಅವರ ಈ ವಿಭಿನ್ನ ಮಾರ್ಗದ ಮೂಲಕ ಅರ್ಜೂನನಿಗೆ ಶ್ರದ್ಧಾಂಜಲಿ ಸಮರ್ಪಿಸಿದ್ದು ಉಡುಪಿಯ ಜನರಿಗೆ ಅಚ್ಚುಮೆಚ್ಚಿನ ನೆನಪುಗಳನ್ನು ಹುಟ್ಟುಹಾಕಿದೆ, ಅವರು ಮತ್ತೊಮ್ಮೆ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಮೆಲುಕುಹಾಕುವಂತೆ ಮಾಡಿದೆ.
ಇದೇ ವೇಳೆಯಲ್ಲಿ ಇತ್ತೀಚೆಗೆ ಅಂಕೋಲಾದಲ್ಲಿ ನಡೆದ ದುರಂತ ಅಪಘಾತದಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡ ಕೇರಳದ ಟ್ರಕ್ ಚಾಲಕ ಅರ್ಜುನ್ ಅವರ ನೆನಪಿಗಾಗಿ ಕುಂದರ್ ಈ ವರ್ಷದ ಅಲಂಕಾರವನ್ನು ಅರ್ಪಿಸಿದರು. ಜಯಕರ್ ಅವರ ಮತ್ತೊಂದು ಆಟೋ ದಲ್ಲಿನ ವಿಭಿನ್ನ ಅಲಂಕಾರ ಅರ್ಜುನ ಆನೆ ಮತ್ತು ಕೇರಳದ ಅರ್ಜುನ್ ಅವರಿಗೆ ಮರ್ಪಕವಾಗುವಂತೆ ಬಿಂಬಿತವಾಗಿತ್ತು. ಈ ವಿಶಿಷ್ಟ ಪ್ರದರ್ಶನದಲ್ಲಿ ಆಟೋಗಳು ಅಗಲಿದ ಇಬ್ಬರಿಗೂ ಗೌರವವನ್ನು ನೀಡುವ ಸಲುವಾಗಿ ಅಲಂಕೃತವಾಗಿತ್ತು.
ತನ್ನ ರಿಕ್ಷಾದ "ಅಂಬಾರಿ" ಅಲಂಕಾರವನ್ನು ಮಾಡಲು ಹುಲ್ಲು ಮತ್ತು ಭತ್ತದ ತೆನೆ, ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಪರಿಸರ ಸ್ನೇಹಿ ವಿಧಾನವನ್ನು ಅಳವಡಿಸಿಕೊಂಡರು. ಉಡುಪಿಯ ಕೃಷ್ಣಾಷ್ಟಮಿ ಮತ್ತು ದಸರಾ ಉತ್ಸವಗಳಲ್ಲಿ ಆಕರ್ಷಕ ವಿನ್ಯಾಸಗಳಿಗೆ ಹೆಸರುವಾಸಿಯಾದ ಸ್ಥಳೀಯ ಕಲಾವಿದ ಅಜಯ್, ಇವರಿಗೆ ಸಾಥ್ ನೀಡಿದರು.
ಈ ಅಲಂಕಾರಕ್ಕೆ ಉಡುಪಿಯ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಮೆಚ್ಚುಗೆ ವ್ಯಕ್ತಪಡಿಸಿ ಜಯಕರ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಲೆ ಮತ್ತು ಪರಿಸರ ಪ್ರಜ್ಞೆ ಎರಡಕ್ಕೂ ಕುಂದರ್ ಅವರ ಸಮರ್ಪಣೆಯನ್ನು ಕಣ್ತುಂಬಿಕೊಳ್ಳಲು ಈಶ್ವರ್ ಅವರ ತಂಡವು ಆಟೋ ಇದ್ದಲ್ಲಿಗೆ ಭೇಟಿ ನೀಡಿತು.
ಈ ವಿಭಿನ್ನ ಶೈಲಿಯ ಆಟೋ ಅಲಂಕಾರ ಪೂರ್ಣಗೊಳ್ಳಲು ಸುಮಾರು ಮೂರು ದಿನಗಳನ್ನು ತೆಗೆದುಕೊಂಡಿತು. ಮತ್ತು ಸ್ಮಾರ್ಟ್ ಆರ್ಟ್ಸ್ ತಂಡದ ಸಹಾಯ ಕೂಡ ಇವರಿಗಿತ್ತು. ವೀಕ್ಷಕರು ಬೀದಿಗಳಲ್ಲಿ ವಿಶಿಷ್ಟ ಶೈಲಿಯ ರಿಕ್ಷಾ ಚಾಲನೆ ವೀಕ್ಷಿಸುವುದನ್ನು ಆನಂದಿಸಿದರು. ಮತ್ತು ಅನೇಕರು ಕುಂದರ್ ಅವರ ಸೃಜನಶೀಲತೆ ಮತ್ತು ಪರಿಸರ ಜಾಗೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಯಕರ್ ಕುಂದರ್ ಅವರು ಪ್ರತಿ ವರ್ಷ ಪರಿಸರ ಸ್ನೇಹಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದು ಈ ವರ್ಷದ ವಿಶಿಷ್ಟ ವಾಹನದ ಮುಖೇನ ಪರಿಸರ ಸ್ನೇಹಿ ಕಾರ್ಯ ಆಯೋಜಿಸಿದ್ದು ಗೌರವಯುತ ಕಾರ್ಯವಾಗಿದೆ ಎಂದು ಅನೇಕರು ಅಭಿಪ್ರಾಯಪಟ್ಟರು.