ಮಂಗಳೂರು, ನ.06(DaijiworldNews/TA):ವ್ಯಕ್ತಿಯೊಬ್ಬರು ತನ್ನ ಮದುವೆ ಆಮಂತ್ರಣ ಪತ್ರದಲ್ಲಿ ಆಧಾರ್, ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಡ್ಡೂರು ನಿವಾಸಿ ಎಕೆ ಮುಸ್ತಫಾ ಅಡ್ಡೂರು ಅವರ ಪುತ್ರ ಮುಹಮ್ಮದ್ ಇಮ್ರಾನ್ ಅವರ ವಿವಾಹವು ಬಿಕೆ ಶರೀಫ್ ಸೂರಲ್ಪಾಡಿ ಅವರ ಪುತ್ರಿ ಸಫೀದಾ ಫಾತಿಮಾ ಜೊತೆ ನವೆಂಬರ್ 28ರಂದು ಗಂಜಿಮಠದ ಝಾರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದ್ದು, ವಿವಾಹ ಕಾರ್ಯದ ಆಮಂತ್ರಣ ಪತ್ರವು ಸದ್ಯ ಜನರ ಗಮನ ಸೆಳೆಯುತ್ತಿದೆ.
ಆಧಾರ್ ಮಾಡಿಸಿ 10 ವರ್ಷ ಆಗಿದ್ದಲ್ಲಿ ಅಪ್ ಡೇಟ್ ಮಾಡಿಸಿ, ಮಕ್ಕಳಿಗೆ ಐದು ವರ್ಷ ಹಾಗೂ 15 ವರ್ಷ ತುಂಬಿದ ಕೂಡಲೇ ಅಪ್ ಡೇಟ್ ಮಾಡಿಸಬೇಕು ಎಂಬ ಸಂದೇಶ ಈ ಕಾರ್ಡ್ ನಲ್ಲಿದೆ. ಅಲ್ಲದೆ ಪತ್ರದ ಕೆಳಾರ್ಧದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಘಟನೆಯ ಲೆಟ್ಸ್ ಬಿಕಂ ಬ್ಲಡ್ ರಿಲೇಟಿವ್ಸ್, ಎವರಿವನ್ ಕುಡ್ ಬಿ ಎ ಹೀರೊ’ ಟ್ಯಾಗ್ ಲೈನ್ ಹಾಕಲಾಗಿದೆ. ರಕ್ತದಾನ ಮಾಡುವ ಮೂಲಕ ಮೂವರ ಜೀವ ಉಳಿಸಬಹುದು ಎಂಬ ಸಂದೇಶ ನೀಡಲಾಗಿದೆ.
ಇನ್ನು ಮದುಮಗ ಮುಹಮ್ಮದ್ ಇಮ್ರಾನ್ ಅವರು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಅವರು ಎಡ್ಮಿನ್ ಆಗಿರುವ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಇಷ್ಟರ ತನಕ 278 ಸಂಘ ಸಂಸ್ಥೆಗಳು 30 ಆಸ್ಪತ್ರೆಗಳ ರಕ್ತನಿಧಿಗಳ ಸಹಯೋಗದಲ್ಲಿ 276 ರಕ್ತದಾನ ಶಿಬಿರ ಆಯೋಜಿಸಿ, 16,316 ಯೂನಿಟ್ ರಕ್ತ ಸಂಗ್ರಹಿಸಿದೆ.