ಕಾರ್ಕಳ , ನ.06(DaijiworldNews/AK): ಪಶ್ಚಿಮಘಟ್ಟದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚುರುಕುಗೊಂಡಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿ ನಕ್ಸಲರು ಮತ್ತೆ ಕಾಣಿಸಿಕೊಂಡಿದ್ದಾರೆ.
ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವು ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದು, ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಸ್ಥಳೀಯರು ಭಯಬೀತರಾಗಿದ್ದಾರೆ.
ಸುಮಾರು ೩೦ರಿಂದ ೪೦ ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ಹಾಡಹಗಲೇ ಕಾಣ ಸಿಕ್ಕಿದ್ದಾರೆ. ಹೀಗೊಂದು ಸುದ್ದಿ ಕಳೆದ ಮೂರು ದಿನಗಳಿಂದ ಹರಿದಾಡುತ್ತಿದೆ.ರಾಜ್ಯದ ಮೊದಲ ನಕ್ಸಲ್ ಎನ್ಕೌಂಟರ್ ನಡೆದ ಸ್ಥಳ ಈದು ಬೊಲ್ಲೊಟ್ಟುನಿಂದ ಸುಮಾರು ೧ ಕಿ.ಮೀ.ದೂರದಲ್ಲಿಯೇ ಈ ಬಾರಿ ನಕ್ಸಲರು ಕಾಣಸಿಗುವ ಮೂಲಕ ಸುದ್ದಿಯಾಗಿದ್ದಾರೆ.
ಕೇರಳದಲ್ಲಿ ನಕ್ಸಲ್ ಎನ್ಕೌಂಟರ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಕ್ಸಲ್ ವಲಸೆ ಆರಂಭಗೊಂಡಿದೆ ಎನ್ನುವ ಸಂದೇಹಗಳು ವ್ಯಕ್ತವಾಗಿದೆ.2002 ಪಶ್ಚಿಮಘಟ್ಟದ ನೆಮ್ಮಾರ್ ಕೊಗ್ರದ ಚೀರಾಮ್ಮ ಎಂಬಾಕೆಯ ಮನೆಯಲ್ಲಿ ಚಿಮ್ಮಿದ ಗುಂಡು ನಕ್ಸಲ್ ಇರುವಿಕೆ ಗೊತ್ತುಪಡಿಸಿತು. ನಕ್ಸಲ್ ಚಟುವಟಿಕೆ ತೀವ್ರಗೊಂಡ ಬೆನ್ನಲ್ಲೇ ೨೦೦೩ರಲ್ಲಿ ಕಾರ್ಕಳ ತಾಲೂಕಿನ ಈದು ಗ್ರಾಮದ ಬೊಲ್ಲೊಟ್ಟುನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿ ಠಿಕಾಣಿ ಹೂಡಿದ ನಕ್ಸಲ್ ತಂಡ ಮೇಲೆ ಅಂದಿನ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್ ಹಾಗೂ ಪೊಲೀಸ್ ಅಧಿಕಾರಿ ಅಶೋಕನ್ 2003 ನವಂಬರ್ 17ರಂದು ಎನ್ ಕೌಂಟರ್ ನಡೆಸಿದ ಪರಿಣಾಮ ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋಧ ಗಾಯಗೊಂಡಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು.
ಅಲ್ಲಿಂದ ಆರಂಭವಾದ ನಕ್ಸಲ್ ಚಟುವಟಿಕೆ ಮುಂದುವರೆದಿದ್ದು, 2010 ಮಾ.೧ರಂದು ಮೈರೊಳ್ಳಿಯಲ್ಲಿ ನಕ್ಸಲ್ ವಸಂತ ಗೌಡನ ಎನ್ಕೌಂಟರ್ ಆಗಿದ್ದರೆ, ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ 20011ರ ಡಿಸೆಂಬರ್ ತಿಂಗಳಲ್ಲಿ ತಿಂಗಳೆ ತೆಂಗುಮಾರ್ ಎಂಬಲ್ಲಿ ಗುಂಡಿ ಸದಾಶಿವ ಗೌಡರನ್ನು ನಕ್ಸಲರು ಹತ್ಯೆಗೈದಿದ್ದರು. ಆ ಬಳಿಕದ ದಿನಗಳಲ್ಲಿ ತಣ್ಣಗಾಗುತ್ತಾ ಸಾಗಿದ ನಕ್ಸಲ್ ಚಟುವಟಿಕೆ, ಇದೀಗ ಮತ್ತೆ ಗರಿಗೆದರುತ್ತಿರುವ ಆತಂಕಕಾರಿ ಬೆಳವಣಿಗೆ ಪಶ್ಚಿಮಘಟ್ಟದ ತಪ್ಪಲಿನಲ್ಲಿ ಸುದ್ದಿಯಾಗುತ್ತಿದೆ.
ನಕ್ಸಲರ ಚಟುವಟಿಕೆಗಳು ಕಡಿಮೆಗೊಂಡಿದೆ ಎನ್ನುವ ಕಾರಣಕ್ಕೆ ನಕ್ಸಲ್ ನಿಗ್ರಹ ದಳ ಕೂಬಿಂಗ್ ಕಾರ್ಯಾಚರಣೆಯಲ್ಲೂ ಸಡಿಲಿಕೆ ಮಾಡಿದೆ.ಕಾರ್ಕಳದ ಪೇಟೆಯಲ್ಲಿ ಪ್ರತ್ಯೇಕವಾದ ಎಎನ್ಎಫ್ ಕೇಂದ್ರವಿದ್ದು, ಪಶ್ಚಿಮಘಟ್ಟದಲ್ಲಿ ಪ್ರತ್ಯೇಕ ತಂಡಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಇದೀಗ ಹೆಚ್ಚಿನ ಅನುಭವಿ ಎಎನ್ಎಫ್ ಸಿಬ್ಬಂದಿಗಳನ್ನು ಮಾತೃ ಇಲಾಖೆಗೆ ವರ್ಗಾವಣೆಗೊಳಿಸಲಾಗಿದ್ದು, ಹೊಸ ಸಿಬ್ಬಂದಿಗಳು ಎಎನ್ಎಫ್ಗೆ ನೇಮಕಗೊಂಡಿದೆ.
ನಕ್ಸಲರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆಯಿಂದ ನಡೆಯುತ್ತಿತ್ತು. ನಕ್ಸಲರ ಮಾಹಿತಿಯುಳ್ಳ ಬಿತ್ತಿಪತ್ರ ಹಾಗೂ ಜಾಗೃತಿ ಪತ್ರಗಳು ಕೂಡಾ ನಕ್ಸಲ್ಪೀಡಿತ ಪ್ರದೇಶಗಳಲ್ಲಿ ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದರು. ಪ್ರಸ್ತುತ ಆ ಕಾರ್ಯಕ್ರಮಗಳು ಇಲಾಖೆಯಿಂದ ನಡೆಯುತ್ತಿಲ್ಲ ಎನ್ನುವ ಆರೋಪವಿದೆ.