ಕಾರ್ಕಳ, ನ.07(DaijiworldNews/AK): ಹುಟ್ಟಿದ ಮಗುವಿನಿಂದ ಕೆಲಸಕ್ಕೆ ಹೋಗಲು ಅಸಾಧ್ಯವಾಗಿ ಮಾನಸಿಕ ವೇದನೆಯಿಂದ ಕೊರಗುತ್ತಿದ್ದ ಮಹಿಳೆಯೊಬ್ಬಳು ಬದುಕು ಅಂತ್ಯ ಹೇಳಿದ ಘಟನೆ ಈದು ಗ್ರಾಮದಲ್ಲಿ ನಡೆದಿದೆ.
ಈದು ಗ್ರಾಮದ ನಿವಾಸಿ ಪ್ರಸನ್ನಾ (29) ಆತ್ಮಹತ್ಯೆ ಮಾಡಿಕೊಂಡವಳು. ಹೊಸ್ಮಾರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಥಿತಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿದ್ದರು. 2022ರಲ್ಲಿ ಈದು ಗ್ರಾಮದ ರಾಜೇಶ್ ಎಂಬವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಸನ್ನಾ 10 ತಿಂಗಳ ಹೆಣ್ಣು ಮಗು ಇದೆ.
ಹೆರಿಗೆಯಾದ ಬಳಿಕ ಪ್ರಸನ್ನಾಳ ಜೀವನಲ್ಲಿ ಭಾರೀ ಬದಲಾವಣೆಗಳು ಕಂಡುಬಂದ ಹಿನ್ನಲ್ಲೆಯಲ್ಲಿ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆಂದು ತಿಳಿದುಬಂದಿದೆ. ಪ್ರಸನ್ನಾ ಅವರು ತನ್ನ ತಾಯಿಗೆ ಕರೆಮಾಡಿ ನನಗೆ ಗಂಡನ ಮನೆಯವರು ಒಳ್ಳೆ ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ನನಗೆ ಇಷ್ಟು ಬೇಗ ಮಗು ಬೇಡವಾಗಿತ್ತು ನಾನು ಕೆಲಸಕ್ಕೆ ಹೋಗಲು ಆಗುವುದಿಲ್ಲ ಎಂದು ಹೇಳುತ್ತಿದ್ದರು.
ತಾನು ಕಷ್ಟಪಟ್ಟು ಓದಿ ಸ್ವಾವಲಂಬಿ ಬದುಕಿನ ಕನಸ್ಸು ಕಂಡಿದ್ದ ಆಕೆ ತನಗೆ ಮಗು ಆದ ಕಾರಣ ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದರು. ನ.6 ರಂದು ಗಂಡನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.