ಮಂಗಳೂರು,ನ.08(DaijiworldNews/TA):ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಕೊಲೆ ಪ್ರಕರಣದ 3 ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಆರೋಪಿಗಳನ್ನು ಜಯಸಿಂಗ್, ಮುಕೇಶ್ ಸಿಂಗ್, ಮನೀಶ್ ತಿರ್ಕಿ ಎಂದು ಗುರುತಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜಾ ರವರು ಕೈಗೊಂಡು ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದಾರೆ.
ಈ ಮೂವರು ಆರೋಪಿಗಳು 2021ರ ನವೆಂಬರ್ 21ರಂದು ಉಳಾಯಿಬೆಟ್ಟು ಪರಾರಿಯ ರಾಜ್ ಟೈಲ್ಸ್ ಫ್ಯಾಕ್ಟರಿಯಲ್ಲಿ 8 ವರ್ಷ ಬಾಲಕಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಮಧ್ಯಪ್ರದೇಶ, ಬಿಹಾರ್, ಉತ್ತರಪ್ರದೇಶ, ಜಾರ್ಖಂಡ್ ರಾಜ್ಯದ ಈ ಮೂವರು ಕಾರ್ಮಿಕರ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.