ಕುಂದಾಪುರ, ನ.08(DaijiworldNews/AA): ಐಶಾರಾಮಿ ಕಾರಿನಲ್ಲಿ ತಡರಾತ್ರಿ ಬಂದ ಮೂವರು ಮುಸುಕುಧಾರಿಗಳು ತಾಲೂಕಿನ ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯ ತಲ್ಮಕ್ಕಿ ಕಾಂಪ್ಲೆಕ್ಸ್ನ ಮುಂಭಾಗದಲ್ಲಿ ದನಗಳನ್ನು ಕಳವುಗೈಯುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಇಲ್ಲಿನ ಹುಣ್ಣೆಮಕ್ಕಿ ಮೇಲ್ ಪೇಟೆ ಹಾಗೂ ಕೆಳಪೇಟೆಯ ಅಂಗಡಿ ಮುಂಗಟ್ಟಿನ ಬಳಿ ದನಗಳು ಮಲಗುತ್ತಿದ್ದು ತಡರಾತ್ರಿ ಮುಸುಕುಧಾರಿಗಳ ತಂಡವು ದನಗಳಿಗೆ ಆಹಾರ ನೀಡುವ ನೆಪದಲ್ಲಿ ಸಮೀಪಕ್ಕೆ ತೆರಳಿ ಅವುಗಳನ್ನು ಕಾರಿನ ಢಿಕ್ಕಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಹೋಗುವ ದೃಶ್ಯವು ಇಲ್ಲಿನ ಕಾಂಪ್ಲೆಕ್ಸ್ ನಲ್ಲಿ ಅಳವಡಿಸಿದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.
ಸೂಕ್ತ ಕ್ರಮಕ್ಕೆ ಆಗ್ರಹ: ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನತೆ ಹಸುಗಳನ್ನು ಮೇವಿಗಾಗಿ ಹೊರ ಬಿಡುತ್ತಿದ್ದು, ಅವುಗಳು ಆಹಾರ ಅರಸಿ ಪ್ರಮುಖ ಭಾಗಗಳಿಗೆ ಬರುವ ಪರಿಣಾಮ ದನಗಳ ನಾಪತ್ತೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಮುಸುಕುಧಾರಿ ಕಳ್ಳರು ಮಾರಕಾಸ್ತ್ರಗಳನ್ನು ಇರಿಸಿಕೊಂಡು ಬರುವುದರಿಂದ ಸ್ಥಳೀಯ ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಸಂಚರಿಸುವಾಗ ಆತಂಕದ ನಡುವೆ ಸಂಚರಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಪೊಲೀಸ್ ಇಲಾಖೆ ಗ್ರಾಮದ ಪ್ರಮುಖ ಭಾಗಗಳಲ್ಲಿ ಸಿಸಿ ಕೆಮರಾವನ್ನು ಅಳವಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೊಂಬಾಡಿ ಮಂಡಾಡಿ ಗ್ರಾಮಪಂಚಾಯತ್ ಸದಸ್ಯ ಸಂತೋಷ್ ಆಗ್ರಹಿಸಿದ್ದಾರೆ.