ಮಂಗಳೂರು, ನ.09(DaijiworldNews/TA):ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಮುಂಬೈ ಬಂಟರ ಸಂಘದ ಸಹಯೋಗದಲ್ಲಿ ಮುಂಬೈಯ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜಾಗತಿಕ ಮಟ್ಟದ "ವಿಶ್ವ ಬಂಟರ ಸಮಾಗಮ"ಬೃಹತ್ ಕಾರ್ಯಕ್ರಮ ಡಿ.7 ರಂದು ನಡೆಯಲಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಬಂಟರ ಯಾನೆ ನಾಡವರ ಮಾತೃ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷ ಉಡುಪಿಯಲ್ಲಿ ಎರಡು ದಿನಗಳ ವಿಶ್ವಮಟ್ಟದ ಬಂಟ ಸಮ್ಮಿಲನವನ್ನು ಆಯೋಜಿಸಿಕೊಂಡಿದ್ದು ಸುಮಾರು 75 ಸಾವಿರಕ್ಕೆ ಮಿಕ್ಕಿ ಸಮಾಜ ಬಾಂಧವರು ಪಾಲ್ಗೊಂಡು ಯಶಸ್ವಿಯಾಗಿ ನಡೆದಿದೆ.
ಮಂಬೈ ನಗರದಲ್ಲಿ 3 ವರ್ಷಗಳ ಹಿಂದೆ ಒಕ್ಕೂಟದ ಬಂಟ ಸಮ್ಮಿಲನ ಯಶಸ್ವಿಯಾಗಿ ನಡೆದಿದೆ. ಈ ವರ್ಷ ಮುಂಬೈ ಮಹಾ ನಗರದಲ್ಲಿ ಜಾಗತಿಕ ಮಟ್ಟದ ಬಂಟ ಸಮಾಜದ ಬಂಧುಗಳನ್ನು ಒಟ್ಟು ಸೇರಿಸುವ ಮಹಾನ್ ಉದ್ದೇಶದೊಂದಿಗೆ ಡಿ.7ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ "ವಿಶ್ವ ಬಂಟರ ಸಮಾಗಮ" ಜಾಗತಿಕ ಮಟ್ಟದ ಕಾರ್ಯಕ್ರಮ ಬೆಳಿಗ್ಗೆಯಿಂದ ಸಂಜೆವರೆಗೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕಾರ್ಯಕ್ರಮವನ್ನು ಮುಂಬೈ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿಯಾಗಿ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ನ ಸಿಎಂಡಿ ತೋನ್ಸೆ ಆನಂದ ಎಮ್.ಶೆಟ್ಟಿ, ಮುಂಬೈ ಹೇರಂಭ ಇಂಡಸ್ಟ್ರೀಸ್ ನ ಅಧ್ಯಕ್ಷ ಕನ್ಯಾನ ಸದಾಶಿವ ಶೆಟ್ಟಿ ಪಾಲ್ಗೊಳ್ಳಲಿದ್ದು ಹಾಗೂ ಪ್ರತಿಷ್ಠಿತ ಉದ್ಯಮಿಗಳು ಸಮಾಜ ಸೇವಕರು ಜಗತ್ತಿನ ವಿವಿಧ ಬಂಟ ಸಂಘಗಳ ಅಧ್ಯಕ್ಷರು ಸೇರಿಕೊಳ್ಳಲಿದ್ದಾರೆ ಎಂದು ತಿಳಿಸಿದರು.