ಮಣಿಪಾಲ, ನ.09(DaijiworldNews/AA): ಗ್ರಾನೈಟ್ ತುಂಬಿದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್ ಡಿಕ್ಕಿ ಹೊಡೆದ ಪರಿಣಾಮ ಹಲವು ದ್ವಿಚಕ್ರ ವಾಹನಗಳು ಜಖಂಗೊಂಡಿರುವ ಘಟನೆ ಇಂದು ಮಧ್ಯಾಹ್ನ ಕೆಳ ಪರ್ಕಳದಲ್ಲಿ ನಡೆದಿದೆ.
ಗ್ರಾನೈಟ್ ತುಂಬಿದ ಲಾರಿ ಹಿಮ್ಮುಖವಾಗಿ ಚಲಿಸಿದ ಪರಿಣಾಮ ಕೆಳಪರ್ಕಳದಲ್ಲಿ ಗಣಪತಿ ನಾಯಕ್ ಅವರ ಮಾಲಕತ್ವದ ಗ್ಯಾರೇಜ್ ನಲ್ಲಿ ನಿಲ್ಲಿಸಿದ್ದ ನಾಲ್ಕೈದು ದ್ವಿಚಕ್ರ ವಾಹನಗಳು ಜಖಂಗೊಂಡಿದೆ.
ಬೆಂಗಳೂರಿನಿಂದ ಗ್ರಾನೈಟ್ ತುಂಬಿಕೊಂಡು ಪರ್ಕಳದ ಹೆರ್ಗಾ ಕಡೆಗೆ ತೆರಳುತ್ತಿದ್ದ ಲಾರಿ ಕೆಳಪರ್ಕಳದ ಹಳೆ ಡಾಮರು ರಸ್ತೆಯ ಏರಿನ ಜಾಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಹಿಮ್ಮುಖವಾಗಿ ಚಲಿಸಿದೆ. ಪರಿಣಾಮ ಲಾರಿ ಗ್ಯಾರೇಜ್ ಗೆ ನುಗ್ಗಿದ್ದು, ಹಲವು ದ್ವಿಚಕ್ರ ವಾಹನಗಳು ನುಜ್ಜುಗುಜ್ಜಾಗಿದ್ದು ಅಲ್ಲದೆ ಲಾರಿಯಲ್ಲಿದ್ದ ಗ್ರಾನೈನ್ ನೆಲಕ್ಕೆ ಬಿದ್ದಿದೆ. ಲಾರಿ ಹಿಮ್ಮುಖವಾಗಿ ಚಲಿಸುತ್ತಿದ್ದಂತೆ ಗ್ಯಾರೇಜ್ ನಲ್ಲಿದ್ದವರು ಓಡಿ ಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ.
ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ಈ ಭಾಗದಲ್ಲಿ ಘನ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ಇಲ್ಲಿನ ಏರು ಪ್ರದೇಶ ಹೊಂಡ ಗುಂಡಿಗಳಿಂದ ಕೂಡಿರುವುದರಿಂದ ಘನ ವಾಹನಗಳು ಹಿಮ್ಮುಖವಾಗಿ ಚಲಿಸಿ ಹೆಚ್ಚಿನ ಅವಘಡಗಳು ಈ ಹಿಂದೆಯೂ ಸಂಭವಿಸಿತ್ತು.