ಉಳ್ಳಾಲ, ಜೂ 04(Daijiworld News/SM): ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ತಲಪಾಡಿ ನಡುವಿನ ತೊಕ್ಕೊಟ್ಟುವಿನಲ್ಲಿ ನಿರ್ಮಿಸಲಾಗಿರುವ ಫ್ಲೈಓವರ್ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಈ ಯೋಜನೆಯಿಂದ ಈ ಭಾಗದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತೊಕ್ಕೊಟ್ಟಿನಲ್ಲಿ ನಡೆದಿರುವುದು ಅವೈಜ್ಞಾನಿಕವಾದ ಕಾಮಗಾರಿ. ಫ್ಲೈ ಓವರ್ ನಿರ್ಮಾಣದ ಸಂದರ್ಭ ಸೂಕ್ತವಾದಂತಹ ಯೋಜನೆ ನಿರ್ಮಿಸಿರುವ ಬಗ್ಗೆ ಗೋಚರವಾಗುತ್ತಿಲ್ಲ. ಪಂಪ್ವೆಲ್ ನಿಂದ ತಲಪಾಡಿ ಕಡೆಗೆ ನೇರವಾಗಿ ವೇಗವಾಗಿ ವಾಹನಗಳು ಚಲಿಸುವ ಸಂದರ್ಭ ಉಳ್ಳಾಲ ಕ್ರಾಸ್ ನಲ್ಲಿ ಅಪಘಾತ ಕಟ್ಟಿಟ್ಟ ಬುತ್ತಿಯಾಗಿದೆ. ಫ್ಲೈ ಓವರ್ ನಿರ್ಮಾಣದ ಬಳಿಕ ನೇರವಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗ ಹೆಚ್ಚಿರುತ್ತದೆ. ಈ ಸಂದರ್ಭ ಉಳ್ಳಾಲ ಕಡೆಗೆ ತೆರಳುವ ವಾಹನಗಳು ಫ್ಲೈ ಓವರ್ ನ ಮತ್ತೊಂದು ಪಾರ್ಶ್ವದಲ್ಲಿ ತಿರುಗುವ ಕಾರಣ ಅಪಘಾತಕ್ಕೆ ಆಹ್ವಾನ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಪರಿಣಾಮ ಈ ಭಾಗದಲ್ಲಿ ಆಸ್ಪತ್ರೆಯನ್ನೇ ನಿರ್ಮಿಸಬೇಕಾದ ಅನಿವಾರ್ಯತೆ ಇರಲಿದೆ ಎಂದರು. ನಾನು ಈ ಹಿಂದೆಯೇ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದಾಗ ಸರಿಪಡಿಸುವುದಾಗಿ ಹೇಳಿದ್ದರು. ಆದರೆ ಸರಿಪಡಿಸಿಲ್ಲ. ಹೀಗಾಗಿ ನಾನು ಸಂಸದರು, ಜಿಲ್ಲಾಧಿಕಾರಿಗಳೊಂದಿಗೆ ಕುಳಿತು ಚರ್ಚೆ ನಡೆಸಲಿದ್ದೇನೆ ಎಂದರು.
ಸಂಸದರನ್ನು ಭೇಟಿ ಮಾಡಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸುತ್ತೇನೆ. ಫ್ಲೈ ಓವರ್ ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ ಜನರಿಗೆ ಎದುರಾಗುವ ಸಮಸ್ಯೆಗಳು, ಸ್ಥಳದಲ್ಲಿ ಉಂಟಾಗುವ ಅಪಘಾತಗಳ ಬಗ್ಗೆ ಸಂಸದರಿಗೆ ಮನವರಿಕೆ ಮಾಡಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.