ಕುಂದಾಪುರ,ನ.11(DaijiworldNews/AK): ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ಇಲಾಖೆಯಿಂದ ಮೂರು ದಿನಗಳ ಕಾಲ ಆಯೋಜಿಸಲಾಗಿರುವ ವಿದ್ಯುತ್ ಕಂಬ ಹತ್ತಿ ಇಳಿಯುವ ಉಚಿತ ತರಬೇತಿಗೆ ಕುಂದಾಪುರ ಗಾಂಧಿ ಮೈದಾನದಲ್ಲಿ ಸೋಮವಾರ ಚಾಲನೆ ದೊರೆತಿದೆ.
ಎಸ್.ಎಸ್.ಎಲ್.ಸಿ ತೇರ್ಗಡೆ ಹೊಂದಿರುವ ಸುಮಾರು ೮೦ ಅಭ್ಯರ್ಥಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮೆಸ್ಕಾಂ ಕುಂದಾಪುರ ವಿಭಾಗದ ನುರಿತ ಸಿಬ್ಬಂದಿಗಳು ತರಬೇತಿಗೆ ಆಗಮಿಸಿದವರಿಗೆ ವಿದ್ಯುತ್ ಕಂಬ ಹತ್ತಿ ಇಳಿಯುವ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು. ನಯನಾ ಎಂಬ ಸ್ಥಳೀಯ ಹುಡುಗಿ ತರಬೇತಿಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಕುಂದಾಪುರ ವಿಭಾಗದ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನೂ ಎರಡು ದಿನ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮೆಸ್ಕಾಂ ಕುಂದಾಪುರ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ್, ಕರ್ನಾಟಕ ವಿದ್ಯುತ್ ಪ್ರಸರನ ನಿಗಮದಿಂದ ಕಿರಿಯ ಮಾರ್ಗದಾಳು ನೇಮಕಾತಿ ನಡೆಯಲಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಮೆಸ್ಕಾಂ ವತಿಯಿಂದ ವಿದ್ಯುತ್ ಕಂಬ ಹತ್ತಿ ಇಳಿಯುವ ತರಬೇತಿ ನೀಡುತ್ತಿದೆ. ಅನುಭವಿ ಸಿಬ್ಬಂದಿಗಳು ವಿದ್ಯುತ್ ಕಂಬ ಹತ್ತಿ ಇಳಿಯುವ ಬಗ್ಗೆ ತರಬೇತಿ ಮಾರ್ಗದರ್ಶನ ನೀಡುತ್ತಿದ್ದಾರೆ. ನೇಮಕಾತಿ ಸಂದರ್ಭ ಬಹುತೇಕ ಅಭ್ಯರ್ಥಿಗಳು ಕಂಬ ಹತ್ತಿ ಇಳಿಯುವಲ್ಲಿ ವಿಫಲರಾಗುತ್ತಿದ್ದಾರೆ. ಇದರಿಂದ ಅವರು ಉದ್ಯೋಗಾವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ದೃಷ್ಟಿಯಿಂದ ಇಂತಹ ತರಬೇತಿಯನ್ನು ಮುಂಚಿತವಾಗಿ ನೀಡಲಾಗುತ್ತಿದೆ. ಸ್ಥಳೀಯರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಕಿರಿಯ ಮಾರ್ಗದಾಳು ನೇಮಕಾತಿಯಲ್ಲಿ ಯಶಸ್ಸು ಗಳಿಸಿ ಉದ್ಯೋಗ ಪಡೆದುಕೊಳ್ಳುವಂತಾಗಬೇಕು ಎಂದರು.
ಮೆಸ್ಕಾಂ ನೇಮಕಾತಿ ಸಂದರ್ಭ ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಬೇಕು. ಇಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿ ಸಂದರ್ಭ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ತರಬೇತಿಯಲ್ಲಿ ಪಾಲ್ಗೊಂಡ ಅನೇಕ ಯುವಕರೊಬ್ಬರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಮೆಸ್ಕಾಂ ಕಿರಿಯ ಮಾರ್ಗದಾಳು ನೇಮಕಾತಿ ಸಂದರ್ಭ ಎಸ್ಎಸ್ಎಲ್ಸಿ ಅಂಕಗಳನ್ನು ಮಾನದಂಡವಾಗಿ ಪರಿಗಣಿಸದೆ, ಸ್ಥಳೀಯರಿಗೆ ಪ್ರಥಮ ಆದ್ಯತೆ ನೀಡಲು ಕ್ರಮಕೈಗೊಳ್ಳಬೇಕು. ಮೆಸ್ಕಾಂ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದರೂ ಎಸ್ಎಸ್ಎಲ್ಸಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳುವ ಸಂದರ್ಭ ಅನೇಕರು ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕಿರಿಯ ಮಾರ್ಗದಾಳು ನೇಮಕಾತಿಯಲ್ಲಿ ಸ್ಥಳೀಯರಿಗೆ ಪ್ರಥಮ ಆದ್ಯತೆ ಹಾಗೂ ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರನ್ನು ಪರಿಗಣಿಸುವಂತೆ ಶಾಸಕರು, ಸಂಸದರು ಸರಕಾರದ ಮೇಲೆ ಒತ್ತಡ ಹೇರಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುವಂತೆ ಕ್ರಮಕೈಗೊಳ್ಳಬೇಕು ಎಂದು ತರಬೇತಿಯಲ್ಲಿ ಪಾಲ್ಗೊಂಡ ಸ್ಥಳೀಯ ಯುವಕರು ಆಗ್ರಹಿಸಿದ್ದಾರೆ.