ಪುತ್ತೂರು, ನ.13(DaijiworldNews/AA): 9 ವರ್ಷದ ಹಿಂದೆ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಶಿಕ್ಷೆ, ಹಾಗೂ ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.
ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸರಿತಾ ಡಿ. ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿಗೆ ಶಿಕ್ಷೆ, ದಂಡ ವಿಧಿಸಿ ಆದೇಶ ನೀಡಿದೆ. ಕಬಕ ವಿದ್ಯಾಪುರ ನಿವಾಸಿ ಮಹಮ್ಮದ್ ಮುಸ್ತಾಫ ಯಾನೆ ಮುಸ್ತಾಫ ಶೇಖ್ ಶಿಕ್ಷೆಗೆ ಗುರಿಯಾದ ಆರೋಪಿ.
ಆರೋಪಿಯು 2015ರ ಡಿ. 4ರಂದು ಕಬಕ ಗ್ರಾಮದಲ್ಲಿ ನಡೆದು ಹೋಗುತ್ತಿದ್ದ ಬಾಲಕಿಯನ್ನು ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದ. ಈ ವೇಳೆ ಬಾಲಕಿ ತಪ್ಪಿಸಿಕೊಂಡು ಹೋಗಿ ಮನೆಯವರಲ್ಲಿ ವಿಷಯ ತಿಳಿಸಿದ್ದಳು. ಬಾಲಕಿ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು 14 ಮಂದಿ ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದು, ಆರೋಪಿ ತಪ್ಪಿತಸ್ಥನೆಂದು ಸಾಬೀತಾದ ಹಿನ್ನೆಲೆ ಆರೋಪಿಗೆ 3 ವರ್ಷ ಜೈಲು ಮತ್ತು 21,400 ರೂ. ದಂಡ ವಿಧಿಸಲಾಗಿದೆ. ಇನ್ನು ಆರೋಪಿಗೆ ವಿಧಿಸಲಾದ ದಂಡದ ಮೊತ್ತದಲ್ಲಿ 15 ಸಾವಿರ ರೂ. ಅನ್ನು ಬಾಲಕಿಗೆ ಪರಿಹಾರದ ರೂಪದಲ್ಲಿ ನೀಡಬೇಕೆಂದು ತೀರ್ಪು ನೀಡಲಾಗಿದೆ.