ಮಂಗಳೂರು, ಜೂ 05 (Daijiworld News/MSP): ಒಂದು ತಿಂಗಳಿನಿಂದ ಕಠಿಣ ವ್ರತ ಆಚರಿಸಿದ ಬಳಿಕ ಇಂದು ಉಪವಾಸ ಅಂತ್ಯಗೊಂಡಿದ್ದು, ರಂಜಾನ್ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಮುಸ್ಲಿಮರ ಪವಿತ್ರ ಹಬ್ಬಗಳಲ್ಲೊಂದಾದ ರಂಜಾನ್ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಜಿಲ್ಲೆಯಾದ್ಯಂತ ಬುಧವಾರ ಆಚರಿಸಲಾಗುತ್ತಿದೆ.
ಇಂದು ಮುಂಜಾನೆಯಿಂದಲೇ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯಲ್ಲಿ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಆರಂಭಗೊಂಡಿದೆ. ಇಂದು ಮುಂಜಾನೆ ಮಂಗಳೂರಿನ ವಿವಿಧ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ವಿನಿಮಯ ಮಾಡಿದರು.
ನಗರದ ಬಾವುಟಗುಡ್ಡೆ ಈದ್ಗಾ ಮಸೀದಿಯಲ್ಲಿ ಸಾವಿರಾರು ಮುಸ್ಲಿಂ ಬಾಂಧವರು ರಂಜಾನ್ ವಿಶೇಷ ಈದ್ ಪ್ರಾರ್ಥನೆ ಸಲ್ಲಿಸಿದರು. ಸಾವಿರಾರು ಮುಸ್ಲಿಂ ಬಾಂಧವರರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಕೂಡಾ ಭಾಗವಹಿಸಿದರು.