ಬಂಟ್ವಾಳ,ಜೂ 05 (Daijiworld News/MSP): ಸರಪಾಡಿ ಎಂ.ಆರ್.ಪಿ.ಎಲ್ . ಡ್ಯಾಂಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯ್ಕ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನೆಕ್ಕಿಲಾಡಿ ಡ್ಯಾಂ ನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಎಂ.ಆರ್.ಪಿ.ಎಲ್. ಡ್ಯಾಂ ನಲ್ಲಿ ನೀರಿನ ಮಟ್ಟ ಏರಿಕೆ ಯಾಗಿತ್ತು. ಆದರೆ ಮರಳು ತುಂಬಿದ್ದರಿಂದ ಡ್ಯಾಂ ನಿಂದ ನೀರು ಕೆಳಗೆ ಹರಿಯುತ್ತಿರಲಿಲ್ಲ.ಸರಪಾಡಿ ಎ.ಎಂ.ಆರ್.ಪಿ.ಎಲ್. ಡ್ಯಾಂ ನ ಗೇಟ್ ಗಳು ಮರಳು ತುಂಬಿ ನೀರಿನ ಕೆಳ ಹರಿವಿಗೆ ತಡೆಯಾಗಿತ್ತು. ಹಾಗಾಗಿ ಡ್ರಜ್ಜಿಂಗ್ ಮೆಷಿನ್ ಬಳಸಿ ಮರಳು ತೆಗೆಯುವ ಕೆಲಸ ಇಲ್ಲಿ ಪ್ರಾರಂಭಿಸಿದರು. ಈ ಕಾಮಗಾರಿಯನ್ನು ಶಾಸಕ ರಾಜೇಶ್ ನಾಯ್ಕ್ ವೀಕ್ಷಿಸಿದರು. ಸರಪಾಡಿಯಿಂದ ತುಂಬೆ ಡ್ಯಾಂ ವರೆಗೆ ಹಿಂದಿನ ಕಾಲದ ಬೋಟ್ ವೇ ಇದ್ದು , ಆ ದಾರಿಯ ಮೂಲಕ ಎ.ಎಂ.ಆರ್.ಪಿ.ಎಲ್ ಡ್ಯಾಂ ನಲ್ಲಿ ದಾಸ್ತಾನು ಇರುವ ನೀರು ನೇರವಾಗಿ ತುಂಬೆ ಡ್ಯಾಂ ನವರೆಗೆ ತಲುಪುತ್ತದೆ.
ನೀರು ಹರಿಯಲು ಕೆಲವೊಂದು ಕಡೆಗಳಲ್ಲಿ ಕಲ್ಲು ಅಥವಾ ಮರಳು ತಡೆಯಾದರೆ ಅದನ್ನು ತೆರವುಗೊಳಿಸುವ ಕೆಲಸ ಮಾಡಲು ಪುರಸಭಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ಈ ವರೆಗೆ ಕುಡಿಯುವ ನೀರಿನ ಸಮಸ್ಯೆ ಆಗಿಲ್ಲ, ಮುಂದಿನ ಒಂದು ತಿಂಗಳ ವರೆಗೆ ಬೇಕಾಗುವ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕ ರಾಜೇಶ್ ನಾಯ್ಕ್ ಈ ಸಂದರ್ಭ ಸುದ್ದಿಗಾರರಿಗೆ ತಿಳಿಸಿದರು. ನದಿಯಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನು ಪಂಪ್ ಮೂಲಕ ಮೇಲಕ್ಕೆ ಎತ್ತಿ , ಜಾಕ್ ವೆಲ್ ಗೆ ಹಾಕಲಾಗುತ್ತದೆ. ಆ ಮೂಲಕ ನೀರನ್ನು ಪುರಸಭೆಯು ಜನರಿಗೆ ಶುದ್ದೀಕರಣ ಮಾಡಿ ನೀಡುತ್ತಿದೆ.ಇನ್ನೂ ಒಂದು ತಿಂಗಳು ಮಳೆ ಬಾರದಿದ್ದರೂ ಜನರಿಗೆ ತೊಂದರೆ ಯಾಗದ ರೀತಿಯಲ್ಲಿ ನೀರು ನೀಡುವ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಎ.ಸಿ.ರವಿಚಂದ್ರನಾಯಕ್, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿಸೋಜ, ಇಂಜಿನಿಯರ್ ಡೊಮಿನಿಕ್ ಡಿ.ಮೆಲ್ಲೊ, ಪುರಸಭಾ ಸದಸ್ಯ ಗೋವಿಂದ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಮುಖರಾದ ರಮಾನಾಥ ರಾಯಿ, ಪವನ್ ಕುಮಾರ್ ಶೆಟ್ಟಿ, ಮಂಜು ಮತ್ತಿತರರು ಉಪಸ್ಥಿತರಿದ್ದರು.