ಲಂಡನ್, ಡಿ 1: ಭಾರತದ ಪವಿತ್ರವಾದ ನದಿಗಳಲ್ಲಿ ಗಂಗಾ ನದಿ ಪ್ರಮುಖವಾದುದು. ಗಂಗಾ ನದಿಯು ದೇವನದಿಯಾಗಿದೆ. ಭಾರತ ದೇಶದ ಉದ್ದಗಲದಲ್ಲಿಯೂ ಗಂಗಾನದಿಯನ್ನು ಮಾತೃದೇವತೆಯ ರೂಪದಲ್ಲಿ ಪೂಜಿಸುತ್ತಾರೆ. ಆದರೆ ಇದೀಗ ಕೈಗಾರಿಕೆಗಳ ತ್ಯಾಜ್ಯಗಳು ನದಿ ಸೇರುತ್ತಿರುವುದರಿಂದ ಗಂಗೆ ಮಲಿನಗೊಳ್ಳುತ್ತಿದೆ.
ಗಂಗಾನದಿ ಸ್ವಚ್ಛತಾ ಅಭಿಯಾನಕ್ಕಾಗಿ 500 ಕೋಟಿ ಮೊತ್ತದ ಯೋಜನೆಗಳಿಗೆ ಹಣ ಒದಗಿಸಲು ಬ್ರಿಟನ್ ನಲ್ಲಿರುವ ಭಾರತದ ಸಂಜಾತ ಉದ್ಯಮಿಗಳು ಮುಂದಾಗಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಪಟ್ನಾ, ಕಾನ್ಪುರ, ಹರಿದ್ವಾರ ಮತ್ತು ಕೋಲ್ಕತ್ತ ನಗರಗಳಲ್ಲಿನ ನದಿ ಮುಖಜ ಪ್ರದೇಶಗಳ ಪುನರುಜ್ಜೀವನ ಮತ್ತು ಘಟ್ಟಗಳ ಅಭಿವೃದ್ಧಿಗೆ ಭಾರತದ ನಾಲ್ವರು ಪ್ರಮುಖ ಉದ್ಯಮಿಗಳು ಕೈ ಜೋಡಿಸಲಿದ್ದಾರೆ ಎಂದು ತಿಳಿಸಿದರು.
ನಮಾಮಿ ಗಂಗಾ ಯೋಜನೆಗೆ ಹೆಚ್ಚು ಹಣ ಖರ್ಚಾಗುವುದರಿಂದ ಅನಿವಾಸಿ ಭಾರತೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೈ ಜೋಡಿಸಬೇಕು ಎಂದು ಗಡ್ಕರಿ ಮನವಿ ಮಾಡಿಕೊಂಡಿದ್ದರು. ಅದರಂತೆ ಕೆಲ ಉದ್ಯಮಿಗಳು ಈ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ.
ಪಟ್ನಾದ ವೇದಾಂತ ಸಮೂಹ ಸಂಸ್ಥೆಯ ಅನಿಲ್ ಅಗರ್ ವಾಲ್, ಹಡಗು ಉದ್ಯಮಿ ರವಿ ಮೆಹೋತ್ರಾ, ಹಿಂದೂಜಾ ಸಮೂಹ ಹಾಗೂ ಇಂಡೋರಾಮ ಸಮೂಹದ ಪ್ರಕಾಶ್ ಲೋಹಿಯಾ ಗಂಗಾನದಿ ಸ್ವಚ್ಛತಾ ಅಭಿಯಾನಕ್ಕೆ ಹಣ ಒದಗಿಸಲು ಮುಂದಾಗಿರುವ ಉದ್ಯಮಿಗಳು.