ಬಂಟ್ವಾಳ, ನ.18(DaijiworldNews/AA): ರಾಜ್ಯದಲ್ಲಿ ಬಿಜೆಪಿಯ ಸದಸ್ಯತ್ವ ಅಭಿಯಾನವನ್ನು ಇನ್ನಷ್ಟು ದಿನಗಳಕಾಲ ವಿಸ್ತರಿಸಲಾಗಿದ್ದು, ಬಂಟ್ವಾಳ ಕ್ಷೇತ್ರದಲ್ಲಿ ನಿಗದಿಪಡಿಸಲಾಗಿರುವ ಸದಸ್ಯತ್ವ ಮತ್ತು ಸಕ್ರಿಯ ಸದಸ್ಯತ್ವದ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಂಘಟನಾ ಪರ್ವದ ಜಿಲ್ಲಾ ಸಹ ಚುನಾವಣಾಧಿಕಾರಿಗಳಾದ ವಿಕಾಸ್ ಪುತ್ತೂರು ಹೇಳಿದ್ದಾರೆ.
ಸೋಮವಾರ ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಸಂಘಟನಾ ಪರ್ವದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಂಟ್ವಾಳ ಕ್ಷೇತ್ರದಲ್ಲಿ 50 ಸಾವಿರ ಸದಸ್ಯತ್ವ ಹಾಗೂ 750 ಸಕ್ರಿಯ ಸದಸ್ಯತ್ವದ ಗುರಿಯನ್ನು ನೀಡಲಾಗಿದ್ದು, ಸದಸ್ಯತ್ವದ ಆರಂಭಿಕ ಹಂತದಲ್ಲಿ ಜಿಲ್ಲೆಯಲ್ಲೇ ಅಗ್ರಸ್ಥಾನದಲ್ಲಿದ್ದ ಬಂಟ್ವಾಳ ಕ್ಷೇತ್ರ ಈಗ ಮೂರನೇ ಸ್ಥಾನದಲ್ಲಿದೆ. ಕಾರ್ಯಕರ್ತರು ಕೊಂಚ ಪರಿಶ್ರಮ ಪಟ್ಟರೆ ನಿಗದಿಪಡಿಸಲಾದ ಗುರಿಯನ್ನು ಸಾಧಿಸಿದರೆ ಮತ್ತೆ ಮೊದಲ ಸ್ಥಾನ ಪಡೆಯುವುದು ನಿಶ್ಚಿತ ಎಂದರು.
ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲಿ 12 ಮಂದಿಯನ್ನೊಳಗೊಂಡ ಸಮಿತಿಯನ್ನು ನ.30 ರ ಒಳಗಾಗಿ ರಚಿಸಬೇಕು, ಪಕ್ಷದಹಿರಿಯರು, ನಿಷ್ಕ್ರೀಯ ಸದಸ್ಯರನ್ನು ಭೇಟಿಯಾಗಿ ಅವರನ್ನು ಮತ್ತೆ ಸಕ್ರಿಯಗೊಳಿಸಲು ಪ್ರಯತ್ನಿಸಬೇಕು. ಬೂತ್ ಸಮಿತಿ ಮುಂಬರುವ ಎಲ್ಲಾ ಚುನಾವಣೆಗೂ ಅಡಿಪಾಯವಾಗಲಿದೆ ಎಂದ ವಿಕಾಸ್ ಜ.15 ರೊಳಗಾಗಿ ರಾಷ್ಟ್ರೀಯಾಧ್ಯಕ್ಷರ ನಿಯುಕ್ತಿಯಾಗಲಿದೆ. ಅದೇ ರೀತಿ ನೂತನ ಮತದಾರರನ್ನು ನೋಂದಾಯಿಸುವ ನಿಟ್ಟಿನಲ್ಲು ಕಾರ್ಯಕರ್ತರು ಮುಂದಾಗಬೇಕು ಎಂದು ತಿಳಿಸಿದರು.
ಸಂಘಟನಾ ಪರ್ವದ ಜಿಲ್ಲಾ ಚುನಾವಣಾಧಿಕಾರಿ ರಾಜೇಶ್ ಕಾವೇರಿ ಅವರು ಮಾತನಾಡಿ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನಾತ್ಮಕವಾಗಿ ಬೆಳೆಸುವ ದೆಸೆಯಲ್ಲಿ ಜಿಲ್ಲೆಯ ಪ್ರತಿಮಂಡಲದಲ್ಲು ನ.30 ರ ಒಳಗಾಗಿ ಸಕ್ರಿಯ ಸದಸ್ಯತ್ವ ಅಭಿಯಾನವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಬಿಜೆಪಿ ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಅವರು ಮಾತನಾಡಿ, ಬಂಟ್ವಾಳ ಕ್ಷೇತ್ರದ ವಿವಿದೆಡೆಯಲ್ಲಿ ನ.೨೩ ರಂದು ನಡೆಯುವ ಉಪಚುನಾವಣೆ ಮುಗಿದ ತಕ್ಷಣ ಶಕ್ತಿಕೇಂದ್ರ ವ್ಯಾಪ್ತಿಯಲ್ಲಿ ಸದಸ್ಯತ್ವ ನೋಂದಣಿಯ ಕಾರ್ಯಾಗಾರ ನಡೆಸಲಾಗುವುದು. ಬಂಟ್ವಾಳ ಪುರಸಭೆಯ ಒಂದು ಸ್ಥಾನ ಸಹಿತ ವಿವಿಧ ಪಂಚಾಯತ್ ನಲ್ಲಿ ತೆರವಾದ ಸ್ಥಾನಗಳಿಗೆ ನಡೆಯುವ ಉಪಚುನಾವಣೆಯಲ್ಲಿ ಕಾರ್ಯಕರ್ತರು ಶ್ರಮಪಟ್ಟು ಕಾರ್ಯನಿರ್ವಹಿಸಿದರೆ ಎಲ್ಲಾ ಸ್ಥಾನವನ್ನು ಬಿಜೆಪಿ ಗೆಲುವು ಸಾಧಿಸಲಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ನಡೆಯುವ ಸಹಕಾರಿ ಸಂಘ, ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾವಣೆಗೂ ಕಾರ್ಯಕರ್ತರು ಈಗಿಂದಿಗಲೇ ಸಜ್ಜಾಗಬೇಕಾಗಿದೆ. ಈಗಾಗಲೇ ಪಾಣೆಮಂಗಳೂರು ಮತ್ತು ಕಲ್ಲಡ್ಕ ರೈ.ಸ.ಸಂಘಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಹಕಾರಿ ಪ್ರಕೋಷ್ಠ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಬಂಟ್ವಾಳ ಕ್ಷೇತ್ರದ ಸಹಯೋಗಿಗಳ ಪಟ್ಟಿಯನ್ನು ಘೋಷಿಸಲಾಯಿತು. ಸಂಘಟನಾ ಪರ್ವದ ಬಂಟ್ವಾಳ ಮಂಡಲದ ಸಹಯೋಗಿ ಅಪ್ಪಯ್ಯ ಮಣಿಯಾಣಿ, ಸಾಜ ರಾಧಾಕೃಷ್ಣ ಆಳ್ವ ಪುತ್ತೂರು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಅಮ್ಟೂರು, ಮಂಡಲ ಪದಾಧಿಕಾರಿಗಳು, ಮೋರ್ಚಾ ಅಧ್ಯಕ್ಷ, ಕಾರ್ಯದರ್ಶಿಗಳು ಮಹಾಶಕ್ತಿ ಕೇಂದ್ರದ ಅಧಕ್ಷ, ಪ್ರಧಾನ ಕಾರ್ಯದರ್ಶಿಗಳು, ಶಕ್ತಿಕೇಂದ್ರದ ಸಹಯೋಗಿಗಳು, ಪ್ರಮುಖರು ಉಪಸ್ಥಿತರಿದ್ದರು.
ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು,ಮಂಡಲ ಮಾಧ್ಯಮ ಪ್ರಮುಖ್ ಪುರುಷೋತ್ತಮ ಶೆಟ್ಟಿ, ವಂದಿಸಿದರು. ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಪತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.