ಕುಂದಾಪುರ, ನ.18(DaijiworldNews/AK):ಭತ್ತ ಬೇಸಾಯವನ್ನು ಉಳಿಸಿಕೊಳ್ಳುವ ಮಹತ್ತರವಾದ ಜವಬ್ದಾರಿ ಇಂದು ಪ್ರತಿಯೊಬ್ಬರ ಮೇಲಿದೆ. ಆದರೆ ಅದು ಭಾಷಣಗಳಿಗಷ್ಟೇ ಸೀಮಿತವಾಗಿ ಹೋಗುತ್ತಿದೆ. ಅನುಷ್ಠಾನ ಎನ್ನುವುದು ಬೆರಳೆಣಿಕೆಯ ಕಡೆಗಳಲ್ಲಿ ಮಾತ್ರ. ಭತ್ತ ಬೇಸಾಯವನ್ನು ಉಳಿಸಿಕೊಳ್ಳಲೆಬೇಕಾದ ಅನಿವಾರ್ಯತೆ ಮತ್ತು ತುರ್ತು ನಮ್ಮ ಮುಂದಿದೆ. ಇಲ್ಲದಿದ್ದರೆ ಕರಾವಳಿಯಲ್ಲಿ ಅನ್ನದ ಬಟ್ಟಲುಗಳಂತ ಗದ್ದೆಗಳು ಹಿಂದೊಂದು ಕಾಲದಲ್ಲಿ ಇದ್ದಿದ್ದವು ಎಂದು ಇತಿಹಾಸವನ್ನು ನೋಡಬೇಕಾಗುತ್ತದೆ.
ಸಾಂಪ್ರದಾಯಿಕ ಭತ್ತ ಬೇಸಾಯ ಸಂಪೂರ್ಣ ನಶಿಸಿರುವ ಈ ಕಾಲಘಟ್ಟದಲ್ಲಿ ಯಾಂತ್ರಿಕೃತ ಕೃಷಿ ವಿಧಾನ ಅನುಸರಿಸಿ ಭತ್ತ ಬೇಸಾಯ ಮಾಡಿದರೆ ಲಾಭ ಗಳಿಸಬಹುದು ಎನ್ನುವ ಭರವಸೆಯ ಪ್ರಯೋಗಗಳು ನಡೆಯುತ್ತಿವೆ. ಈ ನಡುವೆ ಅಂಪಾರು ಸಮೀಪದ ಹಡಾಳಿ ಎಂಬಲ್ಲಿ ಯುವ ಕೃಷಿಕ ಸಂತೋಷ್ ಶೆಟ್ಟಿ ಬಲಾಡಿ ಅವರ ನೇತೃತ್ವದ ತಂಡ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಈ ಬಾರಿ ೧೪.೫ ಎಕ್ರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ನಾಟಿ ಮಾಡಿದೆ. ಇದು ಅವರ ಎರಡನೇ ವರ್ಷದ ಪ್ರಯೋಗ. ಕಳೆದ ವರ್ಷ ೧೦ ಎಕ್ರೆಯಲ್ಲಿ ಭತ್ತ ಬೇಸಾಯ ಮಾಡಿದ್ದರು. ಕಳೆದ ವರ್ಷ ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಸ್ವತಃ ಗದ್ದೆಯಲ್ಲಿ ಉಳುಮೆ ಮಾಡುವ ಮೂಲಕ ಯುವ ತಲೆಮಾರು ಭತ್ತ ಬೇಸಾಯದತ್ತ ಬರಬೇಕು ಎನ್ನುವ ಸಂದೇಶ ರವಾನಿಸಿದ್ದರು.
ಕಳೆದ ಬಾರಿಯಿಂದ ಸ್ಪೂರ್ತಿ ಪಡೆದು ಈ ಬಾರಿ ಹಲವು ರೈತರು ಹಡಿಲು ಭೂಮಿಯನ್ನು ಭತ್ತ ಬೆಳೆಯುವುದರತ್ತ ಮನಸು ಮಾಡಿದ್ದರು. ಕೆಲ ರೈತರು ಈ ತಂಡಕ್ಕೆ ಭೂಮಿಯನ್ನು ಭತ್ತ ಬೇಸಾಯಕ್ಕೆ ನೀಡಿದ್ದಾರೆ. ಕಳೆದ ಬಹು ನಿರೀಕ್ಷೆ ಇಟ್ಟುಕೊಂಡಿತ್ತಾದರೂ ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ಸಂಭವಿಸಿತ್ತು. ಅಷ್ಟಕ್ಕೆ ಕೈಕಟ್ಟಿ ಕುಳಿತುಕೊಳ್ಳದ ಸಂತೋಷ್ ಶೆಟ್ಟಿ ಬಲಾಡಿ ಈ ಬಾರಿ ಮುಂಜಾಗೃತ ಕ್ರಮವಾಗಿ ೧.೨೦ ಲಕ್ಷ ರೂ ವೆಚ್ಚದಲ್ಲಿ ಸೋಲಾರ್ ಆಧಾರಿತ ಐಬೆಕ್ಸ್ ಬೇಲಿ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಬಾರಿ ಕಾಡುಪ್ರಾಣಿಗಳ ಹಾವಳಿಯಲ್ಲಿ ಶೇ.75ರಷ್ಟು ಯಶಸ್ಸು ಕಂಡು ಕೊಂಡಿದ್ದಾರೆ. ಯಾಂತ್ರೀಕೃತ ಕೃಷಿ ವಿಧಾನ ಬಳಕೆಯಿಂದ ಖರ್ಚು ಕಡಿಮೆ. ಯಾಂತ್ರೀಕೃತ ಬೇಸಾಯಕ್ಕೆ ೭ ದಿನಗಳು ಸಾಕಾಗುತ್ತದೆ. 1280 ಮ್ಯಾಟ್ಗಳ ಬಳಸಿ ಕೃಷಿ ಮಾಡಿದ್ದು, ಕಡಿಮೆ ಖರ್ಚಿನಲ್ಲಿ ಕೃಷಿ ಚಟುವಟಿಕೆ ನಡೆಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿ : ಹಂದಿ ನವಿಲು ಮೊದಲಾದ ಕಾಡು ಪ್ರಾಣಿಗಳ ಉಪಟಳದಿಂದ ಸುಮಾರು ಒಂದು ಎಕ್ರೆಯಷ್ಟು ಬೆಳೆಯನ್ನು ಹಾನಿ ಮಾಡಿದೆ. ರಾತ್ರಿ ವೇಳೆ ಹಿಂಡು ಹಿಂಡಾಗಿ ಗದ್ದೆಗೆ ದಾಂಗುಡಿ ಇಡುವ ಇಂತಹ ಕಾಡುಪ್ರಾಣಿಗಳು ಬೆಳೆಗಳಿಗೆ ಹಾನಿ ಮಾಡುತ್ತಿವೆ.
ಕಟಾವು ಯಂತ್ರದ ಕೊರತೆ : ಬೆಳೆದ ಭತ್ತದ ಬೆಳೆಗಳನ್ನು ಕಟಾವು ಮಾಡಲು ಸಮಸ್ಯೆಯಾಗುತ್ತಿದೆ. ೧೫ ಎಕ್ರೆಯಲ್ಲಿ ಬೆಳೆದ ಬೆಳೆಗಳನ್ನು ಕಟಾವು ಮಾಡಲು ಯಂತ್ರಗಳು ಸಿಗುತ್ತಿಲ್ಲ. ಯಾಂತ್ರೀಕೃತಕ್ಕೆ ಹೋಗದಿದ್ದರೆ ಬೆಳೆ ಮಾಡಲು ಸಾಧ್ಯವಿಲ್ಲ. ಕಟಾವು ಯಂತ್ರವನ್ನು ೨೬೦೦ ರೂ.ಗಳಿಗೆ ಬೇಡಿಕೆ ಇಡುತ್ತಿದ್ದಾರೆ. ಇಷ್ಟಾದರೂ ಕಟಾವು ಯಂತ್ರಗಳು ದೊರೆಯುತ್ತಿಲ್ಲ.
ಹಗಲಿರುಳು ಶ್ರಮವಹಿಸಿದ್ದರಿಂದ ಬೆಳೆ ಉತ್ತಮವಾಗಿ ಬೆಳೆದಿದೆ. ಪ್ರಯತ್ನಕ್ಕೆ ದೇವರು ಫಲ ಕೊಟ್ಟಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಪೂರಕವಾದ ಹೋರಾಟಗಳಿಗೆ ಸಹಕಾರ ನೀಡಬೇಕಿದೆ. ಇನ್ನೂ ಹಡಿಲು ಬಿದ್ದ ಮೀನು ಸಾಗಾಣಿಕೆ, ಕಬ್ಬು ಬೆಳೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಕೃಷಿಗೆ ಪೂರಕವಾಗಿ ಎಂಟು ಎಕ್ರೆ ಭೂಮಿಯಲ್ಲಿ ಎರಡನೇ ಬೆಳೆಯನ್ನು ಬೆಳೆಯಲು ಮತ್ತು ಉಳಿದ ಜಾಗದಲ್ಲಿ ತರಕಾರಿ ಬೆಳೆಯಲು ಮುಂದಾಗಿದ್ದೇವೆ ಎನ್ನುತ್ತಾರೆ ಸಂತೋಷ್ ಶೆಟ್ಟಿ.
ಇಲಾಖೆಗಳು ಕಾಟಾಚಾರಕ್ಕೆ ಯಾಂತ್ರೀಕರಣ ಮಾಡುತ್ತೇವೆ ಎಂದು ಹೇಳುವ ಬದಲು. ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದೆ. ಸಹಕಾರಿ ಸಂಸ್ಥೆಗಳು ಕೃಷಿ ಚಟುವಟಿಕೆಗೆ ಬೆಂಬಲ ನೀಡಿದರೆ ಮಾತ್ರ ಕೃಷಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಭತ್ತದ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ. ಸರಕಾರ ಭತ್ತಕ್ಕೆ ೨೩೦೦ ಬೆಂಬಲ ಬೆಲೆ ಘೋಷಿಸಿದ್ದು, ೩೦೦೦-೩೫೦೦ ಬೆಂಬಲ ನೀಡಿದರೆ ಮಾತ್ರ ಲಾಭ ದೊರೆಯುತ್ತದೆ. ಮೊದಲೇ ಬೆಂಬಲ ಬೆಲೆಯನ್ನು ಘೋಷಿಸಿದರೆ ಮಾತ್ರ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ. ಕಾಟಾಚಾರಕ್ಕೆ ಸರಕಾರಗಳು ಕಣ್ಣೋರೆಸುವ ಹೇಳಿಕೆಗಳನ್ನು ನೀಡದೆ, ರೈತರಿಗೆ ಪೂರಕ ವ್ಯವಸ್ಥೆಗಳನ್ನು ಮಾಡಿಕೊಡಬೇಕಿದೆ ಎಂಬುದು ರೈತರ ಅಭಿಪ್ರಾಯವಾಗಿದೆ.