ಸುಬ್ರಹ್ಮಣ್ಯ, ಜೂ 05 (Daijiworld News/MSP): ಸರ್ಪಸಂಸ್ಕಾರದ ವಿಚಾರವಾಗಿ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಡುವೆ ತಲೆದೋರಿರುವ ವಿವಾದ ಪರಿಹರಿಸುವ ಸಲುವಾಗಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ಚಾಮೀಜಿ ಮಧ್ಯಸ್ಥಿಕೆ ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಹಿನ್ನಲೆಯಲ್ಲಿ ಶ್ರೀಗಳು ಜೂನ್ 7ರಂದು ಕುಕ್ಕೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ ದೇವಳದಲ್ಲಿ ಪರಂಪರಾಗತವಾಗಿ ನಡೆಯುತ್ತಾ ಬಂದಿರುವ ಸೇವೆಗಳನ್ನು ಸಂಪುಟ ನರಸಿಂಹ ಸ್ವಾಮಿ ಮಠ ನಡೆಸುತ್ತಿರುವ ಬಗ್ಗೆ ಮತ್ತು ಮಠದ ಸಿಬ್ಬಂದಿ ಕುಮಾರ ಬನ್ನಿಂತಾಯ ಅವರ ಮೇಲಿನ ಹಲ್ಲೆಯ ವಿಚಾರವಾಗಿ ಯತಿಗಳು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.
ದೇವಸ್ಥಾನ - ಮಠ ಈ ಎರಡು ಧಾರ್ಮಿಕ ಕೇಂದ್ರಗಳ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಬೇಕು. ಇದಕ್ಕಾಗಿ ಪೇಜಾವರ ಶ್ರೀಗಳು ಮಧ್ಯ ಪ್ರವೇಶಿಸಬೇಕು ಎನ್ನುವ ಅಭಿಪ್ರಾಯವನ್ನು ಹಿಂದೂ ಸಂಘಟನೆಗಳ ಹಾಗೂ ಮಠದ ಭಕ್ತರು ವ್ಯಕ್ತಪಡಿಸಿದ್ದರು. ಅಲ್ಲದೆ ಈ ಹಿಂದೆ ಮಡೆ ಸ್ನಾನದ ವಿವಾದ ಎದ್ದಾಗ ಶ್ರೀಗಳು ಮಧ್ಯಪ್ರವೇಶಿಸಿ ಯಶಸ್ವಿ ಪರಿಹಾರ ರೂಪಿಸಿದ್ದರು.
ಇದೀಗ ಧಾರ್ಮಿಕ ಕೇಂದ್ರಗಳ ಮಧ್ಯೆ ವಿವಾದಗಳು ಮುಂದುವರಿಯುತ್ತಲೇ ಇರುವ ಕಾರಣ ಉಡುಪಿ ಪೇಜಾವರ ಶ್ರೀಗಳು ಬಂದು ಸಮನ್ವಯ ಸೂತ್ರ ರೂಪಿಸಲು ಯತ್ನಿಸಲಿದ್ದಾರೆಂದು ತಿಳಿದು ಬಂದಿದೆ.